ಟಿ-20 ವಿಶ್ವಕಪ್ ಸಂಭ್ರಮದಲ್ಲಿ ತವರಿಗೆ ಮರಳಲು ತುದಿಗಾಲಲ್ಲಿ ನಿಂತಿರುವ ಟೀಂ ಇಂಡಿಯಾ ತಂಡ ಚಂಡಮಾರುತದ ಪರಿಣಾಮ ವೆಸ್ಟ್ ಇಂಡೀಸ್ ನ ಬಾರ್ಬಡಾಸ್ ನಲ್ಲೇ ಉಳಿಯುವಂತಾಗಿದೆ.
ಚಂಡಮಾರುತ ಬೇರ್ಲಿ ವೆಸ್ಟ್ ಇಂಡೀಸ್ ನಲ್ಲಿ ಅಬ್ಬರಿಸುತ್ತಿದೆ. ಅದೃಷ್ಟವಶಾತ್ ಟಿ-20 ವಿಶ್ವಕಪ್ ಟೂರ್ನಿ ಮುಗಿಯುತ್ತಿದ್ದಂತೆ ಬೆರ್ಲಿ ಅಬ್ಬರ ಕಾಣಿಸಿಕೊಂಡಿದೆ.
ಶನಿವಾರ ತಡರಾತ್ರಿ ಫೈನಲ್ ಪಂದ್ಯ ಮುಗಿದಿದ್ದು, ಭಾರತ ತಂಡ ಭಾರತಕ್ಕೆ ಭಾನುವಾರ ಮರಳಬೇಕಿತ್ತು. ಆದರೆ ಚಂಡಮಾರುತ ಅಬ್ಬರದ ಕಾರಣ ಇನ್ನು ಕೆಲವು ದಿನ ಕೆರಿಬಿಯನ್ ನೆಲದಲ್ಲೇ ಉಳಿದುಕೊಳ್ಳುವ ಸಾಧ್ಯತೆ ಇದೆ.
ಅತ್ಯಂತ ಪ್ರಬಲವಾಗಿರುವ ಚಂಡಮಾರುತ ಸೋಮವಾರ ಕೆರಿಬಿಯನ್ ಕಡಲ ತೀರಕ್ಕೆ ಅಪ್ಪಳಿಸುವ ಸಾಧ್ಯತೆ ಇದ್ದು, ಒಂದೆರಡು ದಿನ ಮಳೆಯ ಅಬ್ಬರ ಮುಂದುವರಿಯಲಿದೆ. ಈ ಹಿನ್ನೆಲೆಯಲ್ಲಿ ಆಟಗಾರರು ಚಂಡಮಾರುತದ ಅಬ್ಬರ ತಗ್ಗಿದ ನಂತರ ಸ್ವದೇಶಕ್ಕೆ ಮರಳಲಿದ್ದಾರೆ ಎಂದು ತಿಳಿದು ಬಂದಿದೆ.
ಭಾರತ ತಂಡ 7 ರನ್ ಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ 17 ವರ್ಷಗಳ ನಂತರ ಟಿ-20 ವಿಶ್ವಕಪ್ ಪ್ರಶಸ್ತಿ ಗೆದ್ದುಕೊಂಡಿತ್ತು. ಭಾರತ ಪ್ರಶಸ್ತಿ ಗೆಲ್ಲುತ್ತಿದ್ದಂತೆ ನಾಯಕ ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ರವೀಂದ್ರ ಜಡೆಜಾ ಟಿ-20 ಕ್ರಿಕೆಟ್ ಗೆ ವಿದಾಯ ಘೋಷಿಸಿದರು.