ತರಬೇತಿ ಅವಧಿಯಲ್ಲೇ ಕೆಂಪು ದೀಪವನ್ನು ಖಾಸಗಿ ಕಾರಿಗೆ ಹಾಕಿಕೊಂಡು ತಿರುಗಾಡಿದ ವಿವಾದಕ್ಕೆ ಸಿಲುಕಿರುವ ಟ್ರೈನಿ ಎಎಎಸ್ ಅಧಿಕಾರಿ ಪೂಜಾ ಖೇಡ್ಕರ್ ವಿರುದ್ಧ ದಿನಕ್ಕೊಂದು ಹೊಸ ಆರೋಪಗಳು ಕೇಳಿ ಬರುತ್ತಿದೆ. ಇದೀಗ ಕೆಂಪು ದೀಪ ಹಾಕಿಕೊಂಡು ಪ್ರಯಾಣಿಸಿದ್ದ ಆಡಿ ಕಾರಿನ ಮೇಲೆ ಸಂಚಾರಿ ನಿಯಮ ಉಲ್ಲಂಘಿಸಿದ 21 ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ.
ಪೂಜಾ ಖೇಡ್ಕರ್ ಸಂಚಾರಿ ನಿಯಮ ಉಲ್ಲಂಘಿಸಿದ 21 ಪ್ರಕರಣಗಳಲ್ಲಿ ದಂಡ ಪಾವತಿಸದೇ ಇರುವುದು ತನಿಖೆ ವೇಳೆ ಬೆಳಕಿಗೆ ಬಂದಿದ್ದು ಪುಣೆ ಸಂಚಾರಿ ಪೊಲೀಸರು ಆಕೆಗೆ ನೋಟಿಸ್ ಜಾರಿ ಮಾಡಿದ್ದಾರೆ.
ಸಂಚಾರಿ ನಿಯಮಗಳನ್ನು ಪಾಲಿಸದೇ ಇರುವುದು ಹಾಗೂ ಅತೀ ವೇಗವಾಗಿ ಕಾರು ಚಲಾಯಿಸಿರುವ 21 ಪ್ರಕರಣಗಳು ದಾಖಲಾಗಿದ್ದು, ಒಟ್ಟಾರೆ 27 ಸಾವಿರ ರೂ. ದಂಡ ಪಾವತಿ ಬಾಕಿ ಉಳಿಸಿಕೊಂಡಿದ್ದಾರೆ. ಕೂಡಲೇ ದಂಡದ ಮೊತ್ತವನ್ನು ಪಾವತಿಸುವಂತೆ ಪುಣೆ ಸಂಚಾರಿ ಪೊಲೀಸರು ಪೂಜಾಗೆ ನೋಟಿಸ್ ಜಾರಿ ಮಾಡಿದ್ದಾರೆ.
ನಿಮ್ಮ ಖಾಸಗಿ ವಾಹವಾದ ಆಡಿ ಸೇಡಾನ್ ಕಾರಿನ ಮೇಲೆ `ಮಹಾರಾಷ್ಟ್ರ ಸರ್ಕಾರ’ ಎಂದು ಫಲಕ ಹಾಕಿಕೊಂಡಿದ್ದೂ ಅಲ್ಲದೇ ಕೆಂಪು ದೀಪ ಬಳಸಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದು ಪೊಲೀಸರು ನೋಟಿಸ್ ನಲ್ಲಿ ಉಲ್ಲೇಖಿಸಿದ್ದು, ಸ್ವತಹ ಮನೆಗೆ ನೋಟಿಸ್ ತಲುಪಿಸಲು ತೆರಳಿದಾಗ ಮನೆಯಲ್ಲಿ ಯಾರೂ ಇರದ ಕಾರಣ ನೋಟಿಸ್ ಅಂಟಿಸಿ ಬಂದಿದ್ದಾರೆ.
ಯುಪಿಎಸ್ಸಿ ಪರೀಕ್ಷಯಲ್ಲಿ 821 ಅಂಕ ಗಳಿಸಿದ್ದ ಪೂಜಾ ಖೇಡ್ಕರ್ ತಾನು ಅಂಗವಿಕಲೆ ಎಂದು ಸುಳ್ಳು ಪ್ರಮಾಣಪತ್ರ ಸಲ್ಲಿಸಿರುವ ಆರೋಪ ಎದುರಿಸುತ್ತಿದ್ದಾರೆ. ಇದೀಗ ಕೇಂದ್ರ ಸರ್ಕಾರ ಪೂಜಾ ವಿರುದ್ಧದ ತನಿಖೆಗೆ ಸಮಿತಿ ರಚಿಸಿ ಆದೇಶ ಹೊರಡಿಸಿದೆ.