ಕಳೆದ ಮೂರು ದಿನಗಳಿಂದ ಸರಣಿ ಬಾಂಬ್ ಬೆದರಿಕೆ ಸಂದೇಶಗಳನ್ನು ಕಳುಹಿಸಿದ ಸಂಚಲನ ಮೂಡಿಸಿದ್ದ ಪ್ರಕರಣವನ್ನು ಅಧಿಕಾರಿಗಳು ಕೊನೆಗೂ ಭೇದಿಸಿದ್ದು, 17 ವರ್ಷದ ಯುವಕನನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಳೆದ ಮೂರು ದಿನಗಳಿಂದ ಹುಸಿಬಾಂಬ್ ಬೆದರಿಕೆ ಕರೆಗಳಿಂದ 12ಕ್ಕೂ ಹೆಚ್ಚು ವಿಮಾನಗಳ ಸಂಚಾರ ಮಾರ್ಗ ಬದಲಾಯಿಸಲಾಗಿತ್ತು. ಅದರಲ್ಲೂ ಪ್ರಮುಖವಾಗಿ ಏರ್ ಇಂಡಿಯಾ ವಿಮಾನಗಳನ್ನೇ ಗುರಿಯಾಗಿ ಬೆದರಿಕೆ ಕರೆಗಳು ಬಂದಿದ್ದರಿಂದ ಅಧಿಕಾರಿಗಳು ಹಾಗೂ ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದರು.
ಛತ್ತೀಸಗಢದ ರಾಜನಂದಗಾನ್ ಜಿಲ್ಲೆಯ 17 ವರ್ಷದ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಈತ ಶಾಲೆ ತೊರೆದಿದ್ದ. ಬಾಲಕನನ್ನು ರಿಮ್ಯಾಂಡ್ ಹೋಂಗೆ ಕಳುಹಿಸಲಾಗಿದ್ದು, ಆತನ ತಂದೆಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಸ್ನೇಹಿತ ಎಕ್ಸ್ ಖಾತೆಯನ್ನು ನೋಡಿಕೊಳ್ಳುತ್ತಿದ್ದ ಯುವಕ, ಆತನನ್ನು ಸಿಕ್ಕಿ ಹಾಕಿಸಲು ಟ್ವೀಟ್ ನಿಂದ ಸುಮಾರು 19 ಹುಸಿ ಬೆದರಿಕೆ ಸಂದೇಶಗಳನ್ನು ರವಾನಿಸಿದ್ದ ಎಂದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.