ನಾಯಕ ಲಿಯೊನೆಲ್ ಮೆಸ್ಸಿ ಗೋಲು ಬಾರಿಸದೇ ಇದ್ದರೂ ಗೋಲುಗಳ ಹಿಂದಿನ ರೂವಾರಿ ಆಗುವ ಮೂಲಕ ಅರ್ಜೆಂಟೀನಾ ತಂಡ ಫಿಫಾ ವಿಶ್ವಕಪ್ ನಲ್ಲಿ ಸತತ ಎರಡನೇ ಬಾರಿ ಫೈನಲ್ ಗೆ ಕೊಂಡೊಯ್ದಿದ್ದಾರೆ. 2-1 ಗೋಲುಗಳಿಂದ ಸೋಲುಂಡ ಇಂಗ್ಲೆಂಡ್ 60 ವರ್ಷಗಳ ನಂತರ ಪ್ರಶಸ್ತಿ ಗೆಲ್ಲುವ ಕನಸು ಭಗ್ನಗೊಂಡಿದೆ.
ಅಟ್ಲಾಂಟಾದಲ್ಲಿ ಬುಧವಾರ ತಡರಾತ್ರಿ ನಡೆದ ಎರಡನೇ ಸೆಮಿಫೈನಲ್ ನಲ್ಲಿ ಅರ್ಜೆಂಟೀನಾ ತಂಡ 0-1 ಗೋಲಿನಿಂದ ಹಿನ್ನಡೆ ಅನುಭವಿಸಿದರೂ ನಂತರ ಅಮೋಘವಾಗಿ ಚೇತರಿಸಿಕೊಂಡು ಕೊನೆಯ ಗಳಿಗೆಯಲ್ಲಿ ಎರಡು ಗೋಲು ಸಿಡಿಸಿ ರೋಚಕ ಜಯ ಸಾಧಿಸಿತು.
ಉಭಯ ತಂಡಗಳ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆದರೂ ಮೊದಲ ಅವಧಿಯಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ. ಆದರೆ ಎರಡನೇ ಅವಧಿಯ ಆಟದ ಆರಂಭದಲ್ಲೇ ಇಂಗ್ಲೆಂಡ್ ಪರ ಆಂಥೋನಿ ಗಾರ್ಡನ್ ೫೫ನೇ ನಿಮಿಷದಲ್ಲಿ ಗೋಲು ಸಿಡಿಸಿ ಮುನ್ನಡೆ ದೊರಕಿಸಿಕೊಟ್ಟರು. ಇದರಿಂದ ಇಂಗ್ಲೆಂಡ್ ಮೇಲೆ ಭರವಸೆ ಹೆಚ್ಚಾಗಿತ್ತು.
ಆದರೆ ಈ ಹಂತದಲ್ಲಿ ಅಮೋಘವಾಗಿ ಆಟ ಪ್ರದರ್ಶಿಸಿದ ಲಿಯೊನೆಲ್ ಮೆಸ್ಸಿ ಗೋಲು ಬಾರಿಸದೇ ಇದ್ದರೂ ಗೋಲು ಗಳಿಸುವ ಅವಕಾಶಗಳನ್ನು ಸೃಷ್ಟಿಸಿದ್ದೂ ಅಲ್ಲದೇ ಎರಡೂ ಗೋಲುಗಳು ದಾಖಲಾಗಲು ಪ್ರಮುಖ ಪಾತ್ರ ವಹಿಸಿದರು. ಇದರಿಂದ ಎನ್ಜೊ ಫರ್ನಾಂಡೀಸ್ 85ನೇ ನಿಮಿಷ ಹಾಗೂ ಲೌಟಾರೊ ಮಾರ್ಟಿನೆಜ್ ಪಂದ್ಯದ ಹೆಚ್ಚುವರಿ ಆಟದ ವೇಳೆ (92ನೇ ನಿಮಿಷ) ಗೋಲು ಸಿಡಿಸಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.
ಈ ಹಂತದಲ್ಲಿ ಉಳಿದ ಅಲ್ಪಾವಧಿಯಲ್ಲಿ ಅರ್ಜೆಂಟೀನಾಗೆ ತಿರುಗೇಟು ನೀಡಲು ಇಂಗ್ಲೆಂಡ್ ನಡೆಸಿದ ಪ್ರಯತ್ನ ಫಲ ನೀಡದೇ ಸೋಲಿನೊಂದಿಗೆ ಮತ್ತೊಮ್ಮೆ ಪ್ರಶಸ್ತಿ ಹೊಸ್ತಿಲಲ್ಲಿ ಎಡವಿ ಟೂರ್ನಿಯಿಂದ ಹೊರಬಿದ್ದಿತು.



