ನಾಯಕ ಶುಭಮನ್ ಗಿಲ್ ಹಾಗೂ ಕೆಳ ಕ್ರಮಾಂಕದಲ್ಲಿ ವಾಷಿಂಗ್ಟನ್ ಸುಂದರ್ ಮತ್ತು ಅಕ್ಸರ್ ಪಟೇಲ್ ಸಿಡಿಸಿದ ಅರ್ಧಶತಕಗಳ ನೆರವಿನಿಂದ ಭಾರತ ತಂಡ 6 ವಿಕೆಟ್ ಗಳಿಂದ ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿದೆ. ಈ ಮೂಲಕ ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ಮೊದಲ ಗೆಲುವು ದಾಖಲಿಸಿದೆ.
ಬರ್ಮಿಂಗ್ ಹ್ಯಾಮ್ ನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡ ಅಕ್ಸರ್ ಮಾರಕ ದಾಳಿಗೆ ತತ್ತರಿಸಿ 47.4 ಓವರ್ ಗಳಲ್ಲಿ ೨೫೮ ರನ್ ಗೆ ಆಲೌಟಾಯಿತು. ಸ್ಪರ್ಧಾತ್ಮಕ ಮೊತ್ತ ಬೆಂಬತ್ತಿದ ಭಾರತ ತಂಡ 45.2 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು. ಈ ಮೂಲಕ ಕಳೆದ 5 ಟಿ-20 ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದ ಭಾರತ ತಂಡ ಮೊದಲ ಬಾರಿ ಗೆಲುವಿನ ನಗೆ ಬೀರಿತು.
ಭಾರತ ತಂಡದ ಹಿರಿಯ ಆಟಗಾರರಾದ ರೋಹಿತ್ ಶರ್ಮ (11) ಮತ್ತು ವಿರಾಟ್ ಕೊಹ್ಲಿ (5) ಬೇಗನೇ ಔಟಾಗಿ ನಿರಾಸೆ ಮೂಡಿಸಿದರು. ಆದರೆ ಗಿಲ್ 75 ಎಸೆತಗಳಲ್ಲಿ 11 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 80 ರನ್ ಬಾರಿಸಿ ಔಟಾದರು. ಈ ಹಂತದಲ್ಲಿ ಶ್ರೇಯಸ್ ಅಯ್ಯರ್ (35) ಮತ್ತು ಕೆಎಲ್ ರಾಹುಲ್ (1) ಔಟಾಗಿದ್ದರಿಂದ ಭಾರತ ಒತ್ತಡಕ್ಕೆ ಸಿಲುಕಿತ್ತು.
ಈ ಹಂತದಲ್ಲಿ ಜೊತೆಯಾದ ವಾಷಿಂಗ್ಟನ್ ಸುಂದರ್ ಮತ್ತು ಅಕ್ಸರ್ ಪಟೇಲ್ ಮುರಿಯದ 5ನೇ ವಿಕೆಟ್ ಗೆ 102 ರನ್ ಜೊತೆಯಾಟದಿಂದ ತಂಡವನ್ನು ಗೆಲುವಿನ ದಡ ತಲುಪಿದರು. ವಾಷಿಂಗ್ಟನ್ ಸುಂದರ್ 63 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 52 ರನ್ ಗಳಿಸಿದರೆ, ಅಕ್ಸರ್ ಪಟೇಲ್ 52 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 57 ರನ್ ಗಳಿಸಿ ಅಜೇಯರಾಗಿ ಉಳಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡ ಜೋ ರೂಟ್ ಮತ್ತು ಲಿಯಾಮ್ ಡಾಸನ್ ಅವರ ಅರ್ಧಶತಕಗಳ ಹೊರತಾಗಿಯೂ ಸಾಧಾರಣ ಮೊತ್ತಕ್ಕೆ ಪತನಗೊಂಡಿತು. ಅಕ್ಸರ್ 4 ವಿಕೆಟ್ ಪಡೆದು ಮಾರಕ ದಾಳಿ ನಡೆಸಿ ಇಂಗ್ಲೆಂಡ್ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಆದರೆ ಮತ್ತೊಂದೆಡೆ ಜೋ ರೂಟ್ 76 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 76 ರನ್ ಬಾರಿಸಿದರೆ, ಲಿಯಾಮ್ 68 ರನ್ ಗಳಿಸಿ ತಂಡವನ್ನು ಆಧರಿಸಿದರು.



