ಮೇಲ್ಸೇತುವೆ ಮೇಲಿಂದ ಹಾರಿದ ಬೆಂಗಳೂರಿನ ಅಯ್ಯಪ್ಪ ಭಕ್ತ ಮೃತಪಟ್ಟ ದಾರುಣ ಘಟನೆ ಕೇರಳದ ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಸಂಭವಿಸಿದೆ.
ಬೆಂಗಳೂರಿನ ಕನಕಪುರ ನಿವಾಸಿ ಕುಮಾರಸ್ವಾಮಿ (40) ಮೃತಪಟ್ಟ ದುರ್ದೈವಿ.
ಮೂರು ದಿನಗಳ ಹಿಂದೆ ಮಾಲೆ ಧರಿಸಿ ಶಬರಿಮಲೆಗೆ ಹೊರಟ್ಟಿದ್ದ ಕುಮಾರಸ್ವಾಮಿ ಅಯ್ಯಪ್ಪ ದೇವಸ್ಥಾನ ಬಳಿಯ ಮಲ್ಲಿಕ್ ಪುರಂ ಮೇಲ್ಸೇತುವೆ ಮೇಲಿಂದ ಜಿಗಿದು ತೀವ್ರವಾಗಿ ಗಾಯಗೊಂಡಿದ್ದರು.
ಕೆಳಗೆ ಬಿದ್ದ ರಭಸಕ್ಕೆ ಅವರ ಕೈ ಮತ್ತು ಕಾಲಿಗೆ ಗಾಯವಾಗಿದ್ದುಕ ಕೂಡಲೇ ಅವರನ್ನು ಸನ್ನಿಧಾನಂ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಪಂಪಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಸಿಟಿ ಸ್ಕ್ಯಾನ್ ಸೇರಿದಂತೆ ಹೆಚ್ಚಿನ ಪರೀಕ್ಷೆಗಳಿಗಾಗಿ ಅವರನ್ನು ಕೊಟ್ಟಾಯಂ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ದುರಾದೃಷ್ಟವಶಾತ್ ಕುಮಾರಸ್ವಾಮಿ ಈ ವೇಳೆ ಹೃದಯಾಘಾತದಿಂದ ಮೃತಪಟ್ಟರು ಎಂದು ವರದಿಯಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಕೇರಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯ ಪೊಲೀಸರು ನೀಡಿದ ಮಾಹಿತಿ ಪ್ರಕಾರ ಕುಮಾರಸ್ವಾಮಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ತಿಳಿದುಬಂದಿದೆ.
ಕುಮಾರಸ್ವಾಮಿ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಆಘಾತಕ್ಕೆ ಒಳಗಾಗಿದ್ದು, ಕೇರಳದ ಪಂಪ ಪೊಲೀಸ್ ಠಾಣೆಯ ಬಳಿ ಇರುವ ಆಸ್ಪತ್ರೆಯಲ್ಲಿ ಮೃತದೇಹ ಇರಿಸಲಾಗಿದೆ.
ಕುಮಾರಸ್ವಾಮಿ ಅವರ ಕುಟುಂಬಸ್ಥರು ಕೇರಳಕ್ಕೆ ಪ್ರಯಾಣ ಬೆಳಸಿದ್ದಾರೆ. ಮನೆಯಲ್ಲಿ ಯಾವುದೇ ರೀತಿ ಸಮಸ್ಯೆ ಆಗಿರಲಿಲ್ಲ ಎಂದು ಕುಮಾರಸ್ವಾಮಿ ಅವರ ಪತ್ನಿ ಹೇಳಿಕೆ ನೀಡಿದ್ದಾರೆ.