ಬೆಂಗಳೂರಿನಲ್ಲಿ ಬಾಡಿಗೆ ನೀಡುವ ಮನೆ ಮಾಲೀಕರ ಷರತ್ತುಗಳನ್ನು ಚಿತ್ರ ವಿಚಿತ್ರವಾಗಿ ಇರುತ್ತದೆ. ಅದರಲ್ಲೂ ಬಾಡಿಗೆ ವಿಷಯದಲ್ಲಂತೂ ವಿಪರೀತಕ್ಕೆ ಹೋಗಿರುವ ಹಲವಾರು ಉದಾಹರಣೆಗಳು ನಮ್ಮ ಮುಂದಿವೆ.
ಮನೆಗೆ ಮೊಳೆ ಹೊಡೆಯುವಂತಿಲ್ಲ. ರಾತ್ರಿ ಲೈಟ್ ಹಾಕುವಂತಿಲ್ಲ, ಮನೆ ಮುಂದೆ ಸ್ವಚ್ಚವಾಗಿ ಇಟ್ಟುಕೊಳ್ಳಬೇಕು ಇದೆಲ್ಲಾ ಕಂಡೀಷನ್ ಜೊತೆಗೆ ಈ ಏರಿಯಾ ಡಿಮ್ಯಾಂಡ್ ಇದೆ ಅಂತಲೋ, ನಮಗೆ ಕಷ್ಟ ಅಂತಲೋ, ಮಾಂಸಹಾರ ಸೇವಿಸದವರಿಗೆ ಮಾತ್ರ ಅಂತಲೋ, ಬ್ರಾಹ್ಮಣರಿಗೆ ಮಾತ್ರ ಅಂತಲೋ ಮನೆ ಬಾಡಿಗೆಗೆ ಕೊಡುವ ಮುನ್ನ ನೂರೆಂಟು ಷರತ್ತು ವಿಧಿಸಲಾಗುತ್ತದೆ.
ಇದೇ ರೀತಿ ಬೆಂಗಳೂರಿನಲ್ಲಿ ಬಾಡಿಗೆ ಮನೆ ಕೇಳಲು ಹೋದ ವ್ಯಕ್ತಿ, ಮನೆಯೊಳಗೆ ಸೂರ್ಯನ ಬೆಳಕು ಬರುತ್ತೆ ಅದಕ್ಕಿ ಮನೆ ಬಾಡಿಗೆ 80,000 ರೂ. ಎಂದು ಮನೆಯ ಒಡತಿ ಕೇಳಿದ ಘಟನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಅನು ಎಂಬುವವರು ತಮ್ಮ X ಖಾತೆಯಲ್ಲಿ ಈ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದು, ಅವರು ಮನೆ ಮಾಲೀಕರ ಅತಿಯಾದ ಬೆಲೆಗೆ ಆಘಾತ ವ್ಯಕ್ತಪಡಿಸಿದ್ದಾರೆ. ನೈಸರ್ಗಿಕ ಬೆಳಕಿನಂತಹ ಸರಳ ವೈಶಿಷ್ಟ್ಯದಿಂದಾಗಿ ಬಾಡಿಗೆಗಳು ತುಂಬಾ ಹೆಚ್ಚಾಗುವುದು ಆಶ್ಚರ್ಯಕರವಾಗಿದೆ ಎಂದು ಹೇಳಿದ್ದಾರೆ.
Bangalore Rent would never stop surprising me.
What do you mean “ma’am is room me sunlight bhi aati hai to iska rent ₹80,000 hai” 😭
— Anu (@Escapeplace__) February 13, 2026
ಬೆಂಗಳೂರಿನ ಬಾಡಿಗೆಗಳು ಪ್ರತಿ ಬಾರಿಯೂ ತಮ್ಮನ್ನು ಆಶ್ಚರ್ಯಗೊಳಿಸುತ್ತದೆ ಎಂದು ಅನು ತಮ್ಮ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದು, ಕೋಣೆಗೆ ಸೂರ್ಯನ ಬೆಳಕು ಸಿಗುತ್ತದೆ. ಇದೇ ಕಾರಣಕ್ಕೆ ಬಾಡಿಗೆಯನ್ನು 80,000 ರೂ.ಗಳಿಗೆ ನಿಗದಿಪಡಿಸಲಾಗಿದೆ ಎಂದು ಅವರು ವಿವರಿಸಿದರು.
ಆರಂಭದಲ್ಲಿ ಇದನ್ನು ನನಗೆ ನಂಬಲಾಗಲಿಲ್ಲ. ಬಳಿಕ ಸೂರ್ಯನ ಬೆಳಕಿನಂತಹ ಸರಳ ವೈಶಿಷ್ಟ್ಯವನ್ನೂ ಸಹ “ಹೆಚ್ಚುವರಿ” ಎಂದು ಪರಿಗಣಿಸಿ ಹೆಚ್ಚಿನ ಬೆಲೆಗೆ ನೀಡಲಾಗುತ್ತಿದೆ ಎಂದು ತಿಳಿದು ಆಘಾತವಾಯಿತು ಎಂದು ಹೇಳಿಕೊಂಡಿದ್ದಾರೆ.
ಈ ಮೊತ್ತ ದುಬಾರಿಯಾಗಿದ್ದು, ಜನರು ಸಾಮಾನ್ಯವಾಗಿ ಮನೆಯಲ್ಲಿ ನಿರೀಕ್ಷಿಸುವ ಸೌಲಭ್ಯಗಳನ್ನು ಈಗ ನಗರದ ಬಾಡಿಗೆ ಮಾರುಕಟ್ಟೆಯಲ್ಲಿ ಪ್ರೀಮಿಯಂ ಎಂದು ನೋಡಲಾಗುತ್ತಿದೆ ಎಂದು ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರ ಪೋಸ್ಟ್ ವ್ಯಾಪಕ ವೈರಲ್ ಆಗಿದ್ದು, ನಗರದಲ್ಲಿ ಮನೆ ಬಾಡಿಗೆ ಎಷ್ಟು ದುಬಾರಿಯಾಗಿದೆ ಎಂಬ ಚರ್ಚೆಗೆ ನಾಂದಿ ಹಾಡಿದೆ.
‘ಒಬ್ಬ ಮಾಲೀಕರು “ಬಾಡಿಗೆ ಪಾವತಿಸುವ ಬದಲು ಇಎಂಐಗೆ 80,000 ನೀಡುವುದು ಉತ್ತಮ” ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು “ನನಗೆ ಮುಂಬೈನಂತೆ ತೋರುತ್ತದೆ” ಎಂದು ಹೇಳಿದ್ದಾರೆ. “ಸೂರ್ಯನ ಬೆಳಕೂ ಕೂಡ ಈಗ ಪ್ರೀಮಿಯಂ ಸೌಲಭ್ಯವಾಗಿದೆ” ಎಂದು ಮೂರನೇ ಬಳಕೆದಾರರು ಸೇರಿಸಿದ್ದಾರೆ.


