ಬೆಂಗಳೂರು: ಮಾಗಡಿ ಹಾಗೂ ಕುಣಿಗಲ್ ಪ್ರದೇಶಕ್ಕೆ ಕುಡಿಯುವ ನೀರು ಪೂರೈಸುವ ಶ್ರೀರಂಗ ಕುಡಿಯುವ ನೀರಿನ ಮಹತ್ತರ ಯೋಜನೆಯೂ 2026ಕ್ಕೆ ಪೂರ್ಣಗೊಳ್ಳಲಿದೆ ಎಂದು ಉಪಮುಖ್ಯಮಂತ್ರಿಗಳ ತಾಂತ್ರಿಕ ಸಲಹೆಗಾರರಾದ ಕೆ.ಜೈಪ್ರಕಾಶ್ ತಿಳಿಸಿದರು.
ನಗರದ ಕಾವೇರಿ ನೀರಾವರಿ ನಿಮಗದ ಕಚೇರಿಯಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ‘ಶ್ರೀರಂಗ ಕುಡಿಯುವ ನೀರಿನ ಕೆರೆಯನ್ನು ತುಂಬಿಸುವ ಯೋಜನೆಗೆ ನೀರಿನ ಹರಿವನ್ನು ಖಾತರಿ ಪಡಿಸುವ ವಿಚಾರವಾಗಿ ಪತ್ರಿಕಾಗೋಷ್ಠಿಯನ್ನು ಉದ್ದೇಶಸಿ ಅವರು ಮಾತನಾಡಿದರು.
ಅಂದಾಜು 986 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿರುವ ಹೇಮಾವತಿಯ ಯೋಜನೆಯ ತುಮಕೂರು ಶಾಖೆಯಿಂದ ಮಾಗಡಿ ಮತ್ತು ಕುಣಿಗಲ್ ಪ್ರದೇಶಕ್ಕೆ ಶ್ರೀರಂಗ ಕುಡಿಯುವ ನೀರಿನ ಯೋಜನೆಯ ಮೂಲಕ ನೀರಿನ ಹರಿವನ್ನು ಖಾತ್ರಿ ಪಡಿಸಲು ರಚಿಸಲಾಗಿದ್ದ ತಾಂತ್ರಿಕ ಸಮಿತಿಯ ವರದಿಯನ್ನು ಕರ್ನಾಟಕ ಸರ್ಕಾರ ಅನುಮೋದಿಸಿದೆ ಎಂದು ಹೇಳಿದರು.
ಹೇಮಾವತಿ ಜಲಾಶಯಕ್ಕೆ ನಿರ್ಮಿಸಲಾಗಿರುವ 72 ಕಿ.ಮಿ ನಾಲೆಯೂ ತುಮಕೂರು ಮತ್ತು ಮಂಡ್ಯ ಎರಡು ಜಿಲ್ಲೆಗಳಿಗೂ ನಿಗದಿತ ನೀರು ಪೂರೈಸುತ್ತಿದ್ದು, ಪ್ರಸ್ತುತ ಇರುವ ಸೌಕಾರ ಚನ್ನಯ್ಯ ನಾಲೆ ನಾಗಮಂಗಲ, ಕೆ.ಆರ್.ಪೇಟೆ ಸೇರಿದಂತೆ ಇತರೇ ಸುತ್ತಮುತ್ತಲ ಪ್ರದೇಶಗಳಿಗೆ ನೀರು ಪೂರೈಸುತ್ತಿದ್ದೆ. ಇನ್ನೊಂದು ಎ.ಜಿ ರಾಮಚಂದ್ರರಾವ್ ನಾಲೆಯೂ ತುಮಕೂರಿನ ತುರುವಿಕೆರೆ, ಕುಣಿಗಲ್ ಪ್ರದೇಶಗಳಿಗೆ ನೀರು ಪೂರೈಸಲು ಉದ್ದೇಶಿಸಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದರು.
ಶ್ರೀರಂಗ ಕುಡಿಯುವ ನೀರಿನ ಯೋಜನೆಯೂ ಒಟ್ಟು 192 ಕಿ.ಮೀ ವ್ಯಾಪ್ಯಿಯನ್ನು ಒಳಗೊಂಡಿದ್ದು, ಅದರ ಕುಣಿಗಲ್ ತಾಲೂಕಿನ 16 ಕೆರೆಗಳು ಮತ್ತು ಮಾಗಡಿ ತಾಲೂಕಿನ 62ಕ್ಕೂ ಹೆಚ್ಚು ಕೆರೆಗಳು ಒಳಗೊಂಡಿದೆ. ಈ ಯೋಜನೆಯ ಮೂಲ ಉದ್ದೇಶ ಎರಡೂ ಪ್ರದೇಶದ ಜನಕ್ಕೆ ಕುಡಿಯಲು ಮಾತ್ರ ನೀರು ನೀಡುವುದಾಗಿದೆ. ನೀರಾವರಿಗೆ ಎರಡನೇ ಹಂತದ ಕಾಮಗಾರಿ ಪೂರ್ಣಗೊಂಡ ಮೇಲೆ ಚಿಂತಿಸಲಾಗುವುದು ಎಂದು ತಿಳಿಸಿದರು.
ನೀರಿನ ಹರಿವನ್ನು ನಿರ್ವಹಿಸಲು ಮತ್ತು ಮಾಹಿತಿ ಪಡೆಯಲು ಸ್ಕ್ಯಾಡಾ ತಂತ್ರಜ್ಞಾನ ಅಳವಡಿಸುವುದು, ಅನಧಿಕೃತ ನೀರಿನ ಬಳಕೆ ತಡೆಗೆ ಕಾನೂನು ಕ್ರಮ ವಹಿಸುವುದು, ತುಮಕೂರು ಶಾಖಾ ನಾಲೆಯಲ್ಲಿ ನೀರು ನಿರ್ವಹಣೆಗೆ ಆನ್ ಮತ್ತು ಆಫ್ ವ್ಯವಸ್ಥೆ ಅಳವಡಿಸುವುದು ಸೇರಿದಂತೆ ಇನ್ನಷ್ಟು ಪ್ರಮುಖ ಶಿಫಾರಸುಗಳು ತಾಂತ್ರಿಕ ಸಮಿತಿಯೂ ಯೋಜನೆಯ ಸುಧಾರಣೆಗಾಗಿ ಹಲವು ಶಿಫಾರಸು ನೀಡಿದ್ದು ಸರ್ಕಾರ ಅದನ್ನ ಅನುಮೋದನೇ ಮಾಡಿದೆ ಎಂದು ಹೇಳಿದರು.
ಈ ಯೋಜನೆಯಲ್ಲಿ ನಿಗದಿತ ಟ್ಯಾಂಕುಗಳಿಗೆ ಮಾತ್ರ ನೀರು ಪೂರೈಸಲು ನಿರ್ಧರಿಸಕಾಗಿದ್ದು, ಇದರಿಂದ ಅಂತರ್ಜಲ ಮಟ್ಟ ಹೆಚ್ಚಾಗಿ ಸ್ಥಳೀಯ ಬೋರ್ ವೆಲ್ಗಳಿಗೆ ನೀರು ಹೆಚ್ಚಾಗುವ ಸಾಧ್ಯತೆ ಇದೆ. ಈ ಯೋಜನೆಯ ವ್ಯಾಪ್ತಿಗೆ ಒಳಪಡದ ಚಿಕ್ಕನಾಯಕನಹಳ್ಳಿ ಹಾಗೂ ಶಿರಾ ತಾಲೂಕಿಗೂ ಇದರಿಂದ ಲಾಭವಾಗಲಿದೆ. ಇದನ್ನ ಜನರು ಯಾವುದೇ ಕಾರಣಕ್ಕು ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಕಾವೇರಿ ಜಲ ನಿಮಗದ ವ್ಯವಸ್ಥಾಪಕ ನಿರ್ದೇಶಕರಾದ ಮಹೇಶ್, ಸಣ್ಣಚಿತ್ತಯ್ಯ ಸೇರಿದಂತೆ ಸಿಬ್ಬಂದಿ ವರ್ಗದವರು ಇದ್ದರು.