Wednesday, June 17, 2026
Google search engine
Homeಅಪರಾಧಪ್ರೇಯಸಿ ಕೊಂದು ವಕೀಲರಿಗೆ ಕರೆ ಮಾಡಿದ ವಾಟರ್‌ ಟ್ಯಾಂಕರ್‌ ಚಾಲಕ!

ಪ್ರೇಯಸಿ ಕೊಂದು ವಕೀಲರಿಗೆ ಕರೆ ಮಾಡಿದ ವಾಟರ್‌ ಟ್ಯಾಂಕರ್‌ ಚಾಲಕ!

ಬೆಂಗಳೂರು: ವ್ಯಕ್ತಿಯೊಬ್ಬ ಪ್ರೀತಿಸಿದ್ದ ಯುವತಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ ಬಳಿಕ ವಕೀಲರೊಬ್ಬರಿಗೆ ಕರೆ ಮಾಡಿ ವಿಷಯ ತಿಳಿಸಿ ಪರಾರಿಯಾಗಿರುವ ಘಟನೆ ಶೇಷಾದ್ರಿಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಹಾಸನದ ಸಕಲೇಶಪುರ ಮೂಲದ ಎನ್.ಡಿ. ಅನುಷಾ (20) ಕೊಲೆಯಾದವರು. ಮನೆ ಮಾಲೀಕ ರಮೇಶ್ ಬಾಬು ನೀಡಿದ ದೂರಿನ ಮೇರೆಗೆ ಆರೋಪಿ ಶರತ್ ನ ವಿರುದ್ಧ ಶೇಷಾದ್ರಿಪುರ ಪೊಲೀಸ್ ಠಾಣೆಯಲ್ಲಿ ಹತ್ಯೆ ಪ್ರಕರಣ ದಾಖಲಾಗಿದೆ.

ಅನುಷಾ ಹಾಗೂ ಶರತ್‌ ಇನ್‌ ಸ್ಟಾಗ್ರಾಂನಲ್ಲಿ ಪರಸ್ಪರ ಪರಿಚಯ ಆಗಿದ್ದು, ೬ ತಿಂಗಳಿನಿಂದ ಮಲ್ಲೇಶ್ವರದ ಮನೆಯೊಂದರಲ್ಲಿ ಸಹಜೀವನ ನಡೆಸುತ್ತಿದ್ದರು. ಇಬ್ಬರೂ ಸಕಲೇಶಪುರದ ಮೂಲದವರಾಗಿದ್ದು, ಪರಿಚಯ ಸ್ನೇಹಕ್ಕೆ ತಿರುಗಿತ್ತು ಎಂದು ತಿಳಿದುಬಂದಿದೆ.

ಕ್ಷುಲಕ ವಿಷಯಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ಆರಂಭವಾಗಿದ್ದು, ಇದು ವಿಕೋಪಕ್ಕೆ ತಿರುಗಿದ್ದರಿಂದ ಶರತ್‌ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

ಬೌರಿಂಗ್ ಆಸ್ಪತ್ರೆಯಲ್ಲಿ ಯುವತಿಯ ಶವದ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಲ್ಲೇಶ್ವರದ 7ನೇ ಕ್ರಾಸ್​ನಲ್ಲಿರುವ ರಮೇಶ್ ಬಾಬುಗೆ ಸೇರಿದ ಮನೆಯೊಂದರಲ್ಲಿ ಮಹದೇವ ಎಂಬುವರು ಬಾಡಿಗೆಗಿದ್ದರು. ಇವರ ಬಳಿ ವಾಟರ್ ಟ್ಯಾಂಕ್ ಚಾಲಕನಾಗಿ ಶರತ್ ಕೆಲಸ ಮಾಡುತ್ತಿದ್ದ. ಶರತ್ ಹಾಗೂ ಮೃತ ಅನುಷಾಗೆ ಇದೇ ಮನೆಯಲ್ಲಿ ಇರುವಂತೆ ತಿಳಿಸಿದ್ದರು.

ಜೂ.14ರಂದು ಮಧ್ಯಾಹ್ನ ಶರತ್, ತಮ್ಮ ವಕೀಲರೊಬ್ಬರಿಗೆ ಕರೆ ಮಾಡಿ ಅನುಷಾ ಸಾವನ್ನಪ್ಪಿರುವ ವಿಚಾರ ತಿಳಿಸಿ ಪರಾರಿಯಾಗಿದ್ದಾನೆ. ಕೃತ್ಯ ಸಂಬಂಧ ಶೇಷಾದ್ರಿಪುರ ಪೊಲೀಸರಿಗೆ ವಕೀಲರು ಮಾಹಿತಿ ನೀಡಿದ್ದು, ಮನೆ ವಿಳಾಸ ಆಧರಿಸಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದರು.

ಮನೆಗೆ ಬೀಗ ಹಾಕಿರುವುದನ್ನ ಕಂಡ ಪೊಲೀಸರು, ಕಿಟಕಿ ಬಳಿ ಇಟ್ಟಿದ್ದ ಬೀಗದ ಕೀ ನೋಡಿ ಕೀ ತೆಗೆದು ಒಳ ಹೋದಾಗ ಅನುಷಾ ನೆಲದ ಮೇಲೆ ಮಲಗಿರುವ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಕತ್ತು ಹಿಸುಕಿ ಹತ್ಯೆ ಮಾಡಿರುವುದು ಮರಣೋತ್ತರ ಪರೀಕ್ಷೆಯಲ್ಲಿ ದೃಢವಾಗಿದೆ. ಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಆರೋಪಿ ಬಂಧನ ಬಳಿಕ ಸತ್ಯಾಂಶ ತಿಳಿಯಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments