ಬೆಂಗಳೂರು: ಭಾರತಿನಗರ ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಪೊಲೀಸರು ದಾಖಲಿಸಿದ ಎಫ್ ಐಆರ್ ನಲ್ಲಿ ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಬೈರತಿ ಬಸವರಾಜ್ ಹೆಸರು ಉಲ್ಲೇಖಿಸಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.
ಕೆಲವು ದಿನಗಳ ಹಿಂದೆಯಷ್ಟೇ ಮನೆಯ ಮುಂದೆ ಭೀಕರವಾಗಿ ದುಷ್ಕರ್ಮಿಗಳಿಂದ ಕೊಲೆಯಾದ ಶಿವಪ್ರಕಾಶ್ ಕೊಲೆ ಹಿಂದೆ ಮಾಜಿ ಸಚಿವ ಬೈರತಿ ಸುರೇಶ್ ಹಾಗೂ ಅವರ ಆಪ್ತರೇ ಕಾರಣ ಎಂದು ಅವರ ತಾಯಿ ವಿಜಯಲಕ್ಷ್ಮಿ ಭಾರತಿನಗರ ಠಾಣೆಗೆ ನೀಡಿದ ದೂರು ನೀಡಿದ್ದಾರೆ.
ದೂರಿನ ಅನ್ವಯ ಪೊಲೀಸರು ಎಫ್ ಐಆರ್ ದಾಖಲಿಸಿದ್ದು, ಕೆಆರ್ ಪುರಂನ ಶಾಸಕ ಬೈರತಿ ಬಸವರಾಜ್ ಎ5 ಆರೋಪಿಯಾಗಿದ್ದಾರೆ. ಅವರ ಆಪ್ತ ಜಗದೀಶ್ ಎ1 , ಕಿರಣ್ ಎ2 ವಿಮಲ್ ಎ3, ಅನಿಲ್ ಎ4 ಆರೋಪಿಗಳಾಗಿದ್ದಾರೆ.
ಕಿತ್ತಕನೂರು ಜಾಗದ ವಿಚಾರವಾಗಿ ಶಿವಕುಮಾರ್ ನನ್ನು ಕೊಲೆ ಮಾಡಲಾಗಿದೆ. ಬಿಳಿ ಬಣ್ಣದ ಸ್ಕಾರ್ಪಿಯೋದಲ್ಲಿ 8 ರಿಂದ 9 ಮಂದಿ ಬಂದು ಮಚ್ಚಿನಿಂದ ಹೊಡೆದಿದ್ದಾರೆ. ಕೊಲೆ ಮಾಡಿರುವ ಆರೋಪಿಗಳು ಹಲವು ಬಾರಿ ಮಗನಿಗೆ ಬೆದರಿಕೆ ಹಾಕಿದ್ದರು.
ಮಾಜಿ ಸಚಿವ ಬೈರತಿ ಬಸವರಾಜ್, ಜಗದೀಶ್ ಮತ್ತು ಇತರರಿಂದ ನನಗೆ ಪ್ರಾಣ ಬೆದರಿಕೆಯಿದೆ ಎಂದು ಹಲವು ಬಾರಿ ಮಗ ಹೇಳಿದ್ದ. ಬಸವರಾಜ್ ಕುಮ್ಮಕ್ಕಿನಿಂದಲೇ ಕೊಲೆ ನಡೆದಿದೆ ಎಂದು ದೂರಿನಲ್ಲಿ ವಿಜಯಲಕ್ಷ್ಮೀ ಆರೋಪಿಸಿದ್ದಾರೆ.
ಫೆಬ್ರವರಿ 21 ರಂದು ಶಿವಪ್ರಕಾಶ್ ಜಗದೀಶ್ ಮತ್ತು ಇತರರ ವಿರುದ್ಧ ಭಾರತಿ ನಗರ ಠಾಣೆಯಲ್ಲಿ ದೂರು ನೀಡಿದ್ದ. ಕಿತ್ತಕನೂರು ಬಳಿ ನಾನು ಜಾಗವನ್ನು ಖರೀದಿಸಿದ್ದೆ. ಈ ಜಾಗವನ್ನು ಮಾರಾಟ ಮಾಡಬೇಕೆಂದು ಜಗದೀಶ್ ಮತ್ತು ಇತರರು ನನಗೆ ಜೀವ ಬೆದರಿಕೆ ಹಾಕಿದ್ದಾರೆ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ದೂರು ನೀಡಿದ್ದ. ಈ ಸಂಬಂಧ ಜಗದೀಶ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಾಗಿತ್ತು.



