ಬೆಂಗಳೂರು:ತುರ್ತು ಪರಿಸ್ಥಿತಿ ಜಾರಿಗೊಳಿಸದೇ ಇದ್ದಿದ್ದರೆ, ಆಗಲೇ ಹೋರಾಟದ ನೆಪದಲ್ಲಿ ಭಾರತವನ್ನು ಛಿದ್ರಗೊಳಿಸುವ ಹುನ್ನಾರ ನಡೆದಿತ್ತು ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಆರೋಪಿಸಿದರು.
ಕ್ವಿಟ್ ಇಂಡಿಯಾ ಚಳವಳಿಯ ಸಂಸರಣೆಯ ಅಂಗವಾಗಿ ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿ ನಾಯಕರು ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ಮಾಡಿ ಪ್ರಜಾಪ್ರಭುತ್ವವನ್ನು ರಕ್ಷಿಸಿದ್ದಾಗಿ ಹೇಳಿಕೊಳ್ಳುತ್ತಾರೆ. ಆದರೆ ತುರ್ತು ಪರಿಸ್ಥಿತಿಯ ಸಂಪೂರ್ಣ ಇತಿಹಾಸ ಬಹುತೇಕರಿಗೆ ತಿಳಿದಿಲ್ಲ ಎಂದರು.
ಜಯಪ್ರಕಾಶ್ ನಾರಾಯಣ್ ಹಾಗೂ ಜಾರ್ಜ್ ಫರ್ನಾಂಡಿಸ್ ನೇತೃತ್ವದಲ್ಲಿ ನಡೆದ ಚಳವಳಿಯಲ್ಲಿ ರೈಲು ಸೇವೆ ಸ್ಥಗಿತಗೊಳಿಸಲಾಗಿತ್ತು.ಪ್ರತಿಭಟನೆ ಸೇರಿದಂತೆ ಹಲವು ಘಟನೆಗಳ ಹಿನ್ನೆಲೆಯಲ್ಲಿ ದೇಶದಲ್ಲಿ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗಿತ್ತು ಎಂದರು.
ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು ಚುನಾವಣೆಯಲ್ಲಿ ಬಳಕೆ ಮಾಡಲಾದ ಧ್ವನಿವರ್ಧಕಕ್ಕೆ ಹೆಚ್ಚಿನ ಹಣ ನೀಡಿದ್ದಾರೆ, ಅವರ ಆಪ್ತ ಕಾರ್ಯದರ್ಶಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದರು ಎಂಬ ಎರಡು ಸಣ್ಣ ಕಾರಣಗಳಿಗಾಗಿ ಲೋಕಸಭಾ ಸದಸ್ಯತ್ವದಿಂದಲೇ ಇಂದಿರಾ ಗಾಂಧಿ ಅವರನ್ನು ಅನರ್ಹಗೊಳಿಸಲಾಗಿತ್ತು.
ಈ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಮೇಲನವಿ ಸಲ್ಲಿಸಿದಾಗ ವಾದಿಸಿದ ಪಾಕಿಲಾಯ ಎಂಬ ವಕೀಲರು, ಸಂಚಾರಿ ಪೊಲೀಸ್ ದಂಡ ವಿಧಿಸುವ ರಶೀದಿಯಷ್ಟು ಸಾಂಧ್ರತೆ ಇರುವ ಆರೋಪಗಳಿಗೆ ಪ್ರಧಾನಿಯಂತಹ ಹುದ್ದೆಯನ್ನೇ ಬರ್ಖಾಸ್ತ್ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು. ಸುಪ್ರೀಂಕೋರ್ಟ್ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಿತ್ತು.
ಇದೇ ಸಂದರ್ಭದಲ್ಲಿ ಜಯಪ್ರಕಾಶ್ ನಾರಾಯಣ್ ಅವರು ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಸಿ ಪೊಲೀಸರು ಹಾಗೂ ಸೈನಿಕರು ಸರ್ಕಾರದ ಆದೇಶ ಪಾಲಿಸಬಾರದು ಎಂದು ಕರೆ ನೀಡಿದ್ದರು. ವಾಜಪೇಯಿ ಅವರು ಇಂದಿರಾ ಗಾಂಧಿ ಮನೆಯಿಂದ ಯಾರೂ ಹೊರ ಬರದಂತೆ ದಿಗ್ಧಂಧನ ವಿಧಿಸಲು ಜನರಿಗೆ ಒತ್ತಾಯಿಸಿದರು. ದೇಶದಲ್ಲಿ ಆಂತರಿಕ ದಂಗೆಯ ಪರಿಸ್ಥಿತಿ ನಿರ್ಮಾಣವಾಗಬಹುದು ಎಂಬ ಕಾರಣ ನೀಡಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ರಾಷ್ಟ್ರಪತಿ ಫಬ್ರುದ್ದೀನ್ ಅಲಿ ಅಹದ್ ಅವರ ಅನುಮೋದನೆಯೊಂದಿಗೆ ಸಂವಿಧಾನದ 352ನೇ ವಿಧಿಯಡಿ ತುರ್ತು ಪರಿಸ್ಥಿತಿ ಘೋಷಿಸಿದ್ದರು ಎಂದು ಹರಿಪ್ರಸಾದ್ ಹೇಳಿದರು.
ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ರಕ್ಷಿಸು ವುದು ಪ್ರತಿಯೊಬ್ಬರ ಜವಾ ಬ್ದಾರಿಯಾಗಿದೆ. ಧರ್ಮಾಧರಿತ ಆಡಳಿತಕ್ಕಿಂತ ಪ್ರಜಾಪ್ರಭುತ್ವವೇ ಶ್ರೇಷ್ಠ ವ್ಯವಸ್ಥೆಯಾಗಿದ್ದು, ಅದನ್ನು ಉಳಿಸಿಕೊಳ್ಳಲು ಎಲ್ಲರೂ ಒಗ್ಗಟ್ಟಿನಿಂದ ಹೋರಾಡಬೇಕು ಎಂದು ಕರೆ ನೀಡಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಆರ್ಎಸ್ಎಸ್ ಅಥವಾ ಬಿಜೆಪಿಯ ಯಾವುದೇ ಪ್ರಾಣಿಯೂ ಭಾಗವಹಿಸಿರಲಿಲ್ಲ. ಒಂದು ವೇಳೆ ಇದು ಸಾಬೀತುಪಡಿಸಿದರೆ ತಾವು ಬಿಜೆಪಿಯ ಗುಲಾಮರಾಗುವುದಾಗಿ ಸವಾಲು ಹಾಕಿದರು.



