ಪ್ರಿಯಕರ ಜೊತೆಗೂಡಿ ಸುಪಾರಿ ಕೊಟ್ಟು ಗಂಡನನ್ನು ಕೊಲೆ ಮಾಡಿಸಿ ಆತ್ಮಹತ್ಯೆ ಕತೆ ಕಟ್ಟಿದ್ದೂ ಅಲ್ಲದೇ ಅಲ್ಲದೇ ಗಂಡನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಸುದ್ದಿಗೋಷ್ಠಿಯನ್ನೂ ಮಾಡಿದ ಚಾಲಕಿ ಗ್ರಾಮ ಪಂಚಾಯಿತಿ ಸದಸ್ಯೆ ಪೊಲೀಸರ ಬಲೆಗೆ ಬಿದ್ದಿದ್ದಾಳೆ.
ಚನ್ನಪಟ್ಟಣ ತಾಲೂಕಿನ ಕೃಷ್ಣಾಪುರದೊಡ್ಡಿ ಗ್ರಾಮದ ನಿವಾಸಿ ಲೋಕೇಶ್ ಸಾವಿನ ಪ್ರಕರಣದಲ್ಲಿ ಗ್ರಾ.ಪಂ ಸದಸ್ಯೆ ಚಂದ್ರಕಲಾ ಹಾಗೂ ಯೋಗೇಶ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಜೂ. 24ರಂದು ಕೃಷ್ಣಾಪುರದೊಡ್ಡಿ ಗ್ರಾಮದಲ್ಲಿ ಗ್ರಾ.ಪಂ ಸದಸ್ಯೆ ಚಂದ್ರಕಲಾ ಪತಿ ಲೋಕೇಶ್ (45) ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು. ಲೋಕೇಶ್ ಶವದ ಬಳಿ ವಿಷದ ಬಾಟಲಿ ಇಟ್ಟು ಆತ್ಮಹತ್ಯೆ ಎಂದು ನಂಬಿಸಲಾಗಿತ್ತು.
ಎಂ.ಕೆ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸುದ್ದಿಗೋಷ್ಠಿ ನಡೆಸಿದ ಚಂದ್ರಕಲಾ, ಪತಿಯ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಳು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಚಂದ್ರಕಲಾ ಫೋನ್ ಕರೆಗಳ ಮಾಹಿತಿ ಸಂಗ್ರಹಿಸಿದಾಗ ಅಸಲಿ ಸತ್ಯ ಹೊರಗೆ ಬಿದ್ದಿತು. ಯೋಗೇಶ್ ಎಂಬಾತನೊಂದಿಗೆ ಚಂದ್ರಕಲಾ ಅನೈತಿಕ ಸಂಬಂಧ ಹೊಂದಿದ್ದು, ಇದಕ್ಕೆ ಪತಿ ಅಡ್ಡಿಯಾಗಿದ್ದರಿಂದ ಪ್ರಿಯಕರನ ಜೊತೆ ಸೇರಿ ಗಂಡ ಕೊಲೆಗೆ ಸಂಚು ರೂಪಿಸಿದ್ದಳು.
ಬೆಂಗಳೂರಿನ ನಾಲ್ವರಿಗೆ ಸುಪಾರಿ ಕೊಟ್ಟು ಗಂಡನನ್ನು ಕೊಲೆ ಮಾಡಿಸಿದ ಚಂದ್ರಕಲಾ, ವಿಷದ ಬಾಟಲಿ ಶವದ ಪಕ್ಕದಲ್ಲಿ ಇರಿಸಿ ಆತ್ಮಹತ್ಯೆ ಎಂಬಂತೆ ಬಿಂಬಿಸಲು ಪ್ರಯತ್ನಿಸಿದ್ದಳು. ಚನ್ನಪಟ್ಟಣದ ಎಂ.ಕೆ.ದೊಡ್ಡಿ ಪೊಲೀಸರು ಉಳಿದ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಮುಂದುವರಿಸಿದ್ದಾರೆ.



