ಕೆಲವು ದಿನಗಳ ಹಿಂದೆ ಶಸ್ತ್ರಾಸ್ತ್ರ ತ್ಯಜಿಸಿ ಶರಣಾಗಿದ್ದ 6 ನಕ್ಸಲರು ಬಳಸುತ್ತಿದ್ದ ಶಸ್ತ್ರಾಸ್ತ್ರಗಳು ಚಿಕ್ಕಮಗಳೂರಿನ ದಟ್ಟ ಅರಣ್ಯದಲ್ಲಿ ಪತ್ತೆಯಾಗಿವೆ.
ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಮೇಗೂರು ಅರಣ್ಯದಲ್ಲಿ ಗುಂಡಿಯಲ್ಲಿ ಮುಚ್ಚಿಡಲಾಗಿದ್ದ 1 ಎಕೆ 56, ಮೂರು 303 ರೈಫಲ್, 12 ಕಂಟ್ರಿ ಮೇಡ್, (ದೇಶಿನಿರ್ಮಿತ) 1 ಪಿಸ್ತೂಲ್ ಸೇರಿದಂತೆ ಹಲವು ಬಂದೂಕುಗಳು ಅಲ್ಲದೇ ಹನ್ನೊಂದು 7.62 ಎಂಎಂ ಎಕೆ ಮದ್ದು ಗುಂಡುಗಳು, 303 ಬಂದೂಕಿನ 133 ಗುಂಡುಗಳು ಸೇರಿದಂತೆ 176 ಜೀವಂತ ಗುಂಡುಗಳು ಪತ್ತೆಯಾಗಿವೆ.
ಜಯಪುರ ಪೊಲೀಸ್ ಠಾಣೆಯಲ್ಲಿ 25(1ಬಿ), 7 ಮತ್ತು 25(1ಎ) ಶಸಾ್ತ್ರಸ್ತ್ರ ಕಾಯ್ದೆ 1959ರಡಿ ಪ್ರಕರಣ ದಾಖಲಾಗಿದ್ದು, ನಕ್ಸಲರು ಶರಣಾದರೂ ಸರ್ಕಾರಕ್ಕೆ ಒಪ್ಪಿಸದ ಶಸ್ತ್ರಾಸ್ತ್ರಗಳನ್ನು ಕಾಡಿನಲ್ಲಿ ಪರಿಶೀಲನೆ ನಡೆಸಲಾಗಿತ್ತು.
ಕೊಪ್ಪ ಠಾಣೆ ಇನ್ಸ್ ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ ಎರಡು ದಿನಗಳಿಂದ ಹುಡುಕಾಟ ನಡೆಸಿ ಶಸ್ತ್ರಾಸ್ತ್ರಗಳನ್ನು ಪತ್ತೆಹಚ್ಚಿದೆ.
ಕೆಲವು ದಿನಗಳ ಮುನ್ನ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಶರಣಾಗಿದ್ದ 6 ನಕ್ಸಲರು ಶಸ್ತ್ರಾಸ್ತ್ರಗಳನ್ನು ವಶಕ್ಕೆ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಮೂಡಿಸಿದ್ದ ಸಾಕಷ್ಟು ಅನುಮಾನಗಳಿಗೆ ತೆರೆ ಬಿದ್ದಂತಾಗಿದೆ.
ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ನಕಲ್ಸರ ಶಸ್ತ್ರಾಸ್ತ್ರಗಳ ಬಗ್ಗೆ ಅನುಮಾನ ಮೂಡಿತ್ತು. ಆದರೆ ಶಸ್ತ್ರಾಸ್ತ್ರಗಳು ವಶಕ್ಕೆ ನೀಡದೇ ಇದ್ದರೂ ಅದು ಎಲ್ಲಿದೆ ಎಂಬ ಮಾಹಿತಿ ಪೊಲೀಸರಿಗೆ ಇದೆ. ಶೀಘ್ರದಲ್ಲೇ ಪತ್ತೆ ಹಚ್ಚಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದರು.