ತರಬೇತಿ ಮುಗಿಸಿ ವರದಿ ಮಾಡಲು ಮರಳುತ್ತಿದ್ದಾಗ ಜೀಪ್ ಪಲ್ಟಿಯಾಗಿ ಯುವ ಐಪಿಎಸ್ ಅಧಿಕಾರಿ ಮೃತಪಟ್ಟ ದಾರುಣ ಘಟನೆ ಹಾಸನದಲ್ಲಿ ಭಾನುವಾರ ಸಂಭವಿಸಿದೆ.
ಹಾಸನ ತಾಲೂಕಿನ ಕಿತ್ತಾನೆ ಗಡಿ ಬಳಿ ಟಯರ್ ಸ್ಫೋಟಗೊಂಡು ಜೀಪ್ ಪಲ್ಟಿಯಾಗಿ ಭೀಕರ ದುರಂತದಲ್ಲಿ ಕರ್ತವ್ಯಕ್ಕೆ ಹಾಜರಾಗುವ ವೇಳೆ ಮಧ್ಯಪ್ರದೇಶ ಮೂಲದ 6 ವರ್ಷದ ಹರ್ಷ ಬರ್ದನ್ ಅಸುನೀಗಿದ್ದಾರೆ.
ಹರ್ಷವರ್ದನ್ ತಂದೆ ಮದ್ಯಪ್ರದೇಶದಲ್ಲಿ ಎಡಿಸಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, 2022ರ ಯುಪಿಎಸ್ ಸಿ ಪರೀಕ್ಷೆಯಲ್ಲಿ 153ನೇ ರಾಂಕ್ ನಲ್ಲಿ ಪಾಸ್ ಆಗಿದ್ದ ಹರ್ಷ ಪ್ರತಿಭಾವಂತ ವಿದ್ಯಾರ್ಥಿಯಾಗಿ ಮೊದಲ ಪ್ರಯತ್ನದಲ್ಲೇ ಯುಪಿಎಸ್ ಸಿ ಪಾಸ್ ಮಾಡಿದ್ದರು.
ಹಾಸನ- ಮೈಸೂರಿನ ಐಜಿ ಕಚೇರಿಯಲ್ಲಿ ಐಜಿ ಭೇಟಿಯಾಗಿ ಹಾಸನದತ್ತ ಬರುತ್ತಿದ್ದಾಗ ಭೀಕರ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಹರ್ಷ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು 4 ಗಂಟೆಗಳ ವೈದ್ಯರ ಶ್ರಮದ ನಡುವೆಯೂ ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ.
ಕರ್ನಾಟಕ ಖೇಡರ್‌ಗೆ ಸೆಲೆಕ್ಟ್ ಆಗಿದ್ದ ಯುವ ಐಪಿಎಸ್ ಅಧಿಕಾರಿ ಹರ್ಷ ಮತ್ತು ಚಾಲಕ ಮಂಜೇಗೌಡ ಗೊರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಕೆಲ ತಿಂಗಳ ಹಿಂದೆ ಹರ್ಷ ಮೈಸೂರಿನ ಕೆಪಿಎ ಕೇಂದ್ರದಲ್ಲಿ ತರಬೇತಿ ಪಡೆದಿದ್ದರು.
ಅಪಘಾತದಲ್ಲಿ ಹರ್ಷ ಅವರ ತಲೆಗೆ ಬಲವಾಗಿ ಪೆಟ್ಟು ಬಿದ್ದು ಮೆದುಳಿಗೆ ಹಾನಿಯಾಗಿತ್ತು. ಹಾಸನದ ಪ್ರಮುಖ ವೈದ್ಯರು ಶ್ರಮ ವಹಿಸಿದ್ದು, ರಾಜ್ಯದ ನುರಿತ ತಜ್ಞರು ಮಾರ್ಗದರ್ಶನ ನೀಡಿದ್ದರು. ಆದರೂ ಚಿಕಿತ್ಸೆ ಫಲ ನೀಡಲಿಲ್ಲ ಎಂದು ಹಾಸನದ ಜನಪ್ರಿಯ ಆಸ್ಪತ್ರೆ ಮುಖ್ಯಸ್ಥ ಡಾ. ಬಸಿರ್ ವಿವರಿಸಿದರು.