ಕಡ್ಲೆ ಗಿಡ ಕಿತ್ತಿದ್ದಕ್ಕೆ ನಾಲ್ವರು ದಲಿತ ಹುಡುಗರ ಮೇಲೆ ಹಲ್ಲೆ ನಡೆಸಿದ ಘಟನೆ ಧಾರವಾಡ ಜಿಲ್ಲೆಯ ತಾಲೂಕಿನ ಶಿಬಾರಗಟ್ಟಿ ಗ್ರಾಮದಲ್ಲಿ ನಡೆದಿದೆ.
ಕಿರಣ ಕುಮಾರ ಶಿವಪ್ಪ ದೊಡ್ಡಮನಿ, ಅಮಿತ ವಿಷ್ಣು ಮಾದರ, ಪವನ ನಾಗರಾಜ ಮೇಲಿನಮನಿ, ಮುತ್ತುರಾಜ ಸುರೇಶ ಮಾದರ ಎಂಬುವರ ಮೇಲೆ ಹಲ್ಲೆ ನಡೆದಿದ್ದು, ಧಾರವಾಡ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕುರಿಗಳಿಗೆ ಹುಲ್ಲು ತರಲು ಹೋದಾಗ ಜಮೀನಿನಲ್ಲಿ ಬೆಳೆದಿದ್ದ ಕಡ್ಲಿ ಗಿಡವನ್ನು ಕಿತ್ತುಕೊಂಡಿದ್ದಕ್ಕೆ ಜಾತಿ ನಿಂದನೆ ಮಾಡಿ ಹಲ್ಲೆ ಮಾಡಿದ ಗ್ರಾಮದ ನಿವಾಸಿಗಳಾದ ಪ್ರವೀಣ ಉಳವಪ್ಪ ಪೊಮೋಜಿ, ಬಸು ರಾಜಪ್ಪ ಪೋಮೋಜಿ, ನಿಂಗಪ್ಪ ರಾಜಪ್ಪ ಪೊಮೋಜಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಕರ್ನಾಟಕ ಭೀಮಸೇನೆ ಸಮಿತಿಯ ರಾಜ್ಯಾಧ್ಯಕ್ಷ ಬಿ.ಡಿ.ಮಾದರ ಧಾರವಾಡ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ, ಹಲ್ಲೆಗೊಳಗಾದ ಹುಡುಗರ ಆರೋಗ್ಯ ವಿಚಾರಿಸಿ, ಕುಟುಂಬ ಸದಸ್ಯರಿಗೆ ನೈತಿಕ ಧೈರ್ಯ ತುಂಬಿದರು.
ನಂತರ ಮಾತನಾಡಿದ ಅವರು, ಶತಮಾನಗಳಿಂದ ದಲಿತರ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಅದನ್ನು ತಡೆಯಲು ಅನೇಕ ಕಾನೂನುಗಳಿದ್ದರೂ ಕೂಡ ಯಾವುದೇ ಪ್ರಯೋಜನವಾಗುತ್ತಿಲ್ಲ. ಕೂಡಲೇ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಬೇಕು. ನಮ್ಮ ಸ್ವಾಭಿಮಾನವನ್ನು ಕೆದಕುವ ಕೆಲಸ ಮಾಡಬಾರದು. ಪೊಲೀಸರು ಹಲ್ಲೆಗೊಳಗಾದ ವ್ಯಕ್ತಿಗಳಿಗೆ ಹಾಗೂ ಕುಟುಂಬ ಸದಸ್ಯರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಅಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಸತೀಶ ಸರ್ಜಾಪುರ ಯುವ ಮುಖಂಡ ಶ್ರೀನಿವಾಸ ಅವರೊಳ್ಳಿ, ಕುಮಾರ ವಕ್ಕುಂದ, ಮಂಜುನಾಥ ಹಡಪದ, ಆನಂದ ಕೊಣ್ಣೂರ, ರಮೇಶ ಮುಳಗುಂದ, ಅಶೋಕ ಶಿರಹಟ್ಟಿ, ಚಂದ್ರಶೇಖರ ಹಿರೇಮಠ, ಮುತ್ತು ಗಡೇಕರ ಸೇರಿದಂತೆ ಇನ್ನಿತರರು ಇದ್ದರು.