ಗುಂಡಿಕ್ಕಿ ಕೊಂದ ಪತಿ!ಜಗಳ ಮಾಡಿಕೊಂಡು ಬುರ್ಖಾ ಧರಿಸದೆ ತವರು ಮನೆಗೆ ತೆರಳಿದ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕೊಂದ ಪತಿ ಮೂವರ ಶವಗಳನ್ನು ಮನೆಯ ನೀರಿನ ಗುಂಡಿಯಲ್ಲಿ ಶವ ಹೂತಿಟ್ಟ ಆಘಾತಕಾರಿ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಕಂಡ್ಲಾ ಪೊಲೀಸ್ ಠಾಣಾ ವ್ಯಾಪ್ತಿಯ ಗಢಿಡಾಲ್ಟ್ ಗ್ರಾಮದ ನಿವಾಸಿ ಫಾರೂಖ್ ಈ ಕೃತ್ಯ ಎಸಗಿದ್ದು, ಪತ್ನಿ ತಾಹಿರಾ (32) ಮತ್ತು ಇಬ್ಬರು ಹೆಣ್ಣುಮಕ್ಕಳಾದ ಅಫ್ರೀನ್ (12) ಮತ್ತು ಸರೀನ್ (5) ಕೊಲೆಯಾದ ದುರ್ದೈವಿಗಳು.
ಸೊಸೆ ಮತ್ತು ಮೊಮ್ಮಕ್ಕಳು ಕಾಣೆಯಾದ ಬಗ್ಗೆ ಮಾವ (ಆರೋಪಿಯ ತಂದೆ) ನೀಡಿದ ದೂರಿನ ಆಧಾರದ ಮೇಲೆ ತನಿಖೆ ನಡೆಸಿದಾಗ, ತ್ರಿವಳಿ ಕೊಲೆ ಪ್ರಕರಣ ಬಯಲಾಗಿದೆ.
ಫಾರೂಖ್ ಕುಟುಂಬದೊಂದಿಗೆ ದೂರವಾಗಿ ಪ್ರತ್ಯೇಕವಾಗಿ ಪತ್ನಿ ಮತ್ತು ಮಕ್ಕಳ ಜೊತೆ ವಾಸವಾಗಿದ್ದು, ಪತ್ನಿಯ ಜೊತೆ ಆಗಾಗ್ಗೆ ಗಲಾಟೆ ಮಾಡುತ್ತಿದ್ದ.
ಗಂಡನ ಕಿರುಕುಳದಿಂದ ಬೇಸತ್ತ ಪತ್ನಿ ತಾಹಿರಾ ಇಬ್ಬರು ಹೆಣ್ಣು ಮಕ್ಕಳ ಜೊತೆ ತವರು ಮನೆಗೆ ಹೋಗಿದ್ದರು. ಹೋಗುವಾಗ ಬುರ್ಖಾ ಧರಿಸದೇ ಹೋಗಿದ್ದು ಪತಿಯ ಆಕ್ರೋಶಕ್ಕೆ ಕಾರಣವಾಗಿತ್ತು.
ಚಹಾ ಮಾಡಲು ಕರೆದೊಯ್ದು ಗುಂಡು ಹಾರಿಸಿದ:
ತಿಂಗಳ ನಂತರ ಪತ್ನಿ ಮತ್ತು ಮಕ್ಕಳು ವಾಪಸ್ ಗಂಡನ ಮನೆಗೆ ಹಿಂದಿರುಗಿದ್ದದಾಗ ಕೊಲೆಗೆ ಸಂಚು ಹಾಕಿ ಕಾದಿದ್ದ ಫಾರೂಖ್ ಡಿಸೆಂಬರ್ 10ರ ರಾತ್ರಿ ಐವರು ಮಕ್ಕಳಲ್ಲಿ ಮೂವರನ್ನು ತಂದೆಯ ಮನೆಗೆ ಕಳುಹಿಸಿದ್ದ. ಮನೆಯಲ್ಲಿ ಇಬ್ಬರು ಪುತ್ರಿಯರು ಮತ್ತು ಪತ್ನಿ ರಾತ್ರಿ ಚಹಾ ಮಾಡುವ ನೆಪದಲ್ಲಿ ಹೆಂಡತಿಯನ್ನು ಎಬ್ಬಿಸಿ ಮನೆಯೊಳಕ್ಕೆ ಕರೆದೊಯ್ದು ತನ್ನಲ್ಲಿದ್ದ ಬಂದೂಕಿನಿಂದ ಗುಂಡು ಹಾರಿಸಿದ್ದಾನೆ.
ಗುಂಡಿನ ಶಬ್ದ ಕೇಳಿ ಹಿರಿಯ ಮಗಳು ಒಳಗೆ ಬಂದಾಗ, ಆಕೆಗೂ ಗುಂಡು ಹಾರಿಸಿದ್ದಾನೆ. ನಂತರ ಕಿರಿಯ ಮಗಳನ್ನು ಕತ್ತು ಹಿಸುಕಿ ಕೊಂದಿದ್ದಾನೆ. ಮೂವರನ್ನೂ ಹತ್ಯೆ ಮಾಡಿದ ಬಳಿಕ, ಶೌಚಾಲಯ ನಿರ್ಮಾಣಕ್ಕಾಗಿ ಅಗೆದಿದ್ದ ಸೆಪ್ಟಿಕ್ ಟ್ಯಾಂಕ್ ಗುಂಡಿಯಲ್ಲಿ ಶವಗಳನ್ನು ಹೂತು ಹಾಕಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಸೊಸೆ, ಮೊಮ್ಮಕ್ಕಳು ಕಾಣೆಯಾದ ಬಗ್ಗೆ ಅಜ್ಜ ದೂರು: ಹದಿನೈದು ದಿನಗಳಿಂದ ಸೊಸೆ ಮತ್ತು ಇಬ್ಬರು ಮೊಮ್ಮಕ್ಕಳು ಕಾಣದಿದ್ದಾಗ ಅಜ್ಜ (ಆರೋಪಿಯ ತಂದೆ) ಅನುಮಾನಗೊಂಡಿದ್ದಾರೆ. ಈ ಬಗ್ಗೆ ಅವರು ಡಿಸೆಂಬರ್ 13ರಂದು ಸಂಜೆ ದೂರು ನೀಡಿದ್ದಾರೆ. ತನಿಖೆ ಆರಂಭಿಸಿದ ಪೊಲೀಸರು, ಫಾರೂಖ್ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಾನೇ ಮೂವರನ್ನು ಕೊಂದು ಹೂತು ಹಾಕಿದ್ದಾಗಿ ಒಪ್ಪಿಕೊಂಡಿದ್ದಾನೆ.
ಹಂತಕ ಫಾರುಖ್ ಮನೆಯ ಹಿಂಭಾಗ ಗುಂಡಿ ಅಗೆದು ಮೂವರ ಶವಗಳನ್ನು ಹೂತು ಹಾಕಿದ್ದಾನೆ. ಆತನೇ ನೀಡಿದ ಮಾಹಿತಿಯ ಮೇರೆಗೆ ಗುಂಡಿ ಅಗೆದು ಮೂವರು ಶವಗಳನ್ನು ಹೊರತೆಗೆದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಆರೋಪಿ ಕೊಲೆಗೆ ಬಳಸಿದ ಪಿಸ್ತೂಲ್ ಮತ್ತು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬುರ್ಖಾ ಧರಿಸದೆ ತವರು ಮನೆಗೆ ಸಿಟ್ಟಾಗಿ ಹೋಗಿದ್ದಕ್ಕೆ ಕೊಲೆ ಮಾಡಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಎಸ್ಪಿ ನರೇಂದ್ರ ಪ್ರತಾಪ್ ಸಿಂಗ್ ತಿಳಿಸಿದರು.


