ಮಂಗಳೂರಿನ ಉಳ್ಳಾಲದ ಕೆಸಿ ರಸ್ತೆಯಲ್ಲಿರುವ ಕೋಟೆಕಾರ್ ಸಹಕಾರಿ ಬ್ಯಾಂಕ್ ನಲ್ಲಿ ನಡೆದ ಸಿನಿಮಯ ಶೈಲಿಯ ದರೋಡೆಯ ಒಂದೊಂದೇ ಮಾಹಿತಿ ಲಭಿಸುತ್ತಿದ್ದಂತೆ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.
ಶುಕ್ರವಾರ ಮಧ್ಯಾಹ್ನ 12 ಗಂಟೆಯ ನಂತರ 5 ಜನರ ಗುಂಪು ಮುಸುಧಾರಿಯಾಗಿ ಬ್ಯಾಂಕ್ ಒಳಗೆ ಪ್ರವೇಶಿಸಿದ್ದು, ತಲವಾರು, ಬಂದೂಕು ತೋರಿಸಿ ದರೋಡೆ ಮಾಡಿ ಪರಾರಿಯಾಗಿದ್ದಾರೆ.
ಬೀದರ್ ನಲ್ಲಿ ಎಟಿಎಂ ವಾಹನದ ಮೇಲೆ ಗುಂಡಿನ ದಾಳಿ ನಡೆಸಿ ಇಬ್ಬರನ್ನು ಹತ್ಯೆಗೈದ ದುಷ್ಕರ್ಮಿಗಳು 83 ಲಕ್ಷ ರೂ. ಜೊತೆ ತೆಲಂಗಾಣಕ್ಕೆ ಪರಾರಿಯಾಗಿರುವ ಘಟನೆ ನಡೆದ ಬೆನ್ನಲ್ಲೇ ಮಂಗಳೂರಿನಲ್ಲಿ ಬ್ಯಾಂಕ್ ದರೋಡೆ ನಡೆದಿದ್ದು, ರಾಜ್ಯದ ಜನರನ್ನು ಬೆಚ್ಚಿಬೀಳಿಸುವಂತೆ ಮಾಡಿದೆ.
5 ಜನ ದರೋಡೆಕೋರರು ಸಾಕಷ್ಟು ಯೋಜನೆ ರೂಪಿಸಿ ಬ್ಯಾಂಕ್ ದರೋಡೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಕಾರನ್ನು ರಸ್ತೆಯ ಮತ್ತೊಂದು ತುದಿಯಲ್ಲಿ ನಿಲ್ಲಿಸಿ ನಾಲ್ವರು ಬ್ಯಾಂಕ್ ಒಳಗೆ ಪ್ರವೇಶಿಸಿದ್ದಾರೆ.
ದರೋಡೆಕೋರರು ಶುಕ್ರವಾರ ನಮಾಜ್ ಸಮಯ ಕಾದಿದ್ದು ಮಧ್ಯಾಹ್ನ 12 ಗಂಟೆ ನಂತರ ಬ್ಯಾಂಕ್ ಗೆ ನುಗ್ಗಿದ್ದು, ಕೇವಲ 5 ನಿಮಿಷಗಳಲ್ಲಿ ಬ್ಯಾಂಕ್ ನಲ್ಲಿದ್ದ ಚಿನ್ನಾಭರಣ ಹಾಗೂ ನಗದು ಬ್ಯಾಗ್ ಗೆ ತುಂಬಿಸಿಕೊಂಡು ಹೋಗಿದ್ದಾರೆ.
ದರೋಡೆಕೋರರು ಹೊರಗೆ ಬರುತ್ತಿದ್ದಂತೆ ಮತ್ತೊಂದು ತುದಿಯಲ್ಲಿ ನಿಲ್ಲಿಸಿದ್ದ ಕಾರನ್ನು ಬ್ಯಾಂಕ್ ಬಳಿ ತಂದಿದ್ದು, ಕೇವಲ 17 ಸೆಕೆಂಡ್ ಗಳಲ್ಲಿ ನಾಲ್ವರು ಕಾರು ಹತ್ತಿ ಪರಾರಿಯಾಗಿದ್ದಾರೆ.
ಕಾರು ತಲಪಾಡಿ ಮಾರ್ಗವಾಗಿ ಕೇರಳ ಕಡೆ ಹೊರಟ್ಟಿದ್ದು, ದರೋಡೆ ಮಾಡಿದವರು ಕನ್ನಡ ಮಾತನಾಡುತ್ತಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.
ಕೆಟ್ಟ ಸಿಸಿಟಿವಿ, ಸಿಎಂ ಕಾರ್ಯಕ್ರಮ
ದರೋಡೆಕೋರರು ಪ್ರದೇಶದಲ್ಲಿ ಮುಸ್ಲಿಮ್ ಸಮುದಾಯ ಹೆಚ್ಚಾಗಿ ಇರುವುದರಿಂದ ಒಟ್ಟಾಗಿ ಸೇರಿದರೆ ಕಷ್ಟವಾದೀತು ಎಂದು ನಮಾಜ್ ಸಮಯ ನೋಡಿಕೊಂಡು ದರೋಡೆ ಮಾಡಿರುವುದು ಪೊಲೀಸರು ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ.
ಕಾಕತಾಳೀಯ ಅಂದರೆ ಕೆಲವು ದಿನಗಳಿಂದ ಬ್ಯಾಂಕ್ ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾಗಳು ಕೆಟ್ಟು ನಿಂತಿದ್ದು, ರಿಪೇರಿಗೆ ವ್ಯಕ್ತಿಯನ್ನು ಕರೆಸಲಾಗಿತ್ತು. ರಿಪೇರಿ ಆಗುವ ಮುನ್ನವೇ ದರೋಡೆಕೋರರು ತಮ್ಮ ಕೈಚಳಕ ತೋರಿಸಿ ಹೋಗಿದ್ದಾರೆ.
ಮತ್ತೊಂದೆಡೆ ಮಂಗಳೂರಿಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ್ದರಿಂದ ಪೊಲೀಸರ ಗಮನ ಆ ಕಡೆ ಇದ್ದು, ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿತ್ತು. ಇದು ಕೂಡ ದರೋಡೆಕೋರರಿಗೆ ಪರಾರಿಯಾಗಲು ನೆರವಾಯಿತು ಎಂಬ ಮಾತುಗಳು ಕೇಳಿ ಬರುತ್ತಿವೆ.