ತಮಿಳುನಾಡಿನ ಓಂಶಕ್ತಿ ದೇವಸ್ಥಾನಕ್ಕೆ ಭೇಟಿ ನೀಡಿ ಮರಳುತ್ತಿದ್ದ ಕೋಲಾರದ ನಾಲ್ವರು ಸೇರಿದಂತೆ 5 ಮಂದಿ ಮೃತಪಟ್ಟ ದಾರುಣ ಘಟನೆ ಗುರುವಾರ ಮುಂಜಾನೆ ಸಂಭವಿಸಿದೆ.
ತಮಿಳುನಾಡಿನ ರಾಣಿಪೇಟೆ ಬಳಿ ಕರ್ನಾಟಕದ ಕೆಎಸ್ಸಾರ್ಟಿಸಿ ಬಸ್ ಹಾಗೂ ಕ್ಯಾಂಟರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬಸ್ ಚಾಲಕ ಹಾಗೂ ಕೋಲಾರದ ನಾಲ್ವರು ಅಸುನೀಗಿದ್ದು, ಬಸ್ ನಲ್ಲಿದ್ದ 50 ಪ್ರಯಾಣಿಕರಲ್ಲಿ ಬಹುತೇಕ ಮಂದಿ ಗಾಯಗೊಂಡಿದ್ದು, ಮಹಿಳೆಯೊಬ್ಬರ ಸ್ಥಿತಿ ಗಂಭೀರವಾಗಿದೆ.
ಕ್ಯಾಂಟರ್ ಚಾಲಕ ಮಂಜುನಾಥ್, ಕ್ಲೀನರ್ ಶಂಕರ್, ಸಹಾಯಕ ಸೋಮಶೇಖರ್, ವೆಂಕಟೇಶ್ ನಗರ ಗ್ರಾಮದ ರೈತ ಕೃಷ್ಣಪ್ಪ ಮೃತಪಟ್ಟಿದ್ದಾರೆ. ನಲ್ಲೂರು ಗ್ರಾಮದ ಸರಸ್ವತಮ್ಮ ಸ್ಥಿತಿ ಗಂಭೀರವಾಗಿದೆ.
ಮುಳಬಾಗಿಲು ತಾಲೂಕಿನ ನಲ್ಲೂರು ಗ್ರಾಮದ 50 ಮಂದಿ ಭಕ್ತರು ಕೆಎಸ್ಆರ್ಟಿಸಿ ಬಸ್ನಲ್ಲಿ ತಮಿಳುನಾಡಿನ ಮೇಲ್ಮರವತ್ತೂರು ಓಂ ಶಕ್ತಿ ದೇವಸ್ಥಾನಕ್ಕೆ ಭೇಟಿ ನೀಡಿ ಬಸ್ ನಲ್ಲಿ ಮರಳುತ್ತಿದ್ದರು. ಇದೇವೇಳೆ ಶ್ರೀನಿವಾಸಪುರ ತಾಲೂಕು ಸೀಗೆಹಳ್ಳಿ ಗ್ರಾಮದಿಂದ ಚೆನೈಗೆ ತರಕಾರಿ ತುಂಬಿಕೊಂಡು ಹೋಗುತ್ತಿದ್ದ ಕ್ಯಾಂಟರ್ ಡಿಕ್ಕಿ ಹೊಡೆದಿದೆ.
ಗಾಯಾಳುಗಳನ್ನು ತಮಿಳುನಾಡಿನ ವೇಲೂರು ಸಿಎಂಸಿ ಆಸ್ಪತ್ರೆ, ರತ್ನಗಿರಿ ಮೆಡಿಕಲ್ ಕಾಲೇಜಿನಲ್ಲಿ ದಾಖಲಿಸಲಾಗಿದೆ. ರಾಣಿಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.