ಶರಣಾಗುವ ನಕ್ಸಲರಿಗೆ ಜೀವನ ಕಟ್ಟಿಕೊಳ್ಳಲು 7.50 ಲಕ್ಷ ರೂ. ನೆರವು ನೀಡಲಾಗುವುದು ಎಂದು ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮ್ಟೆ ಘೋಷಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಸ್ತ್ರಾಸ್ತ್ರ ಹಿಡಿದು ನಕ್ಸಲ್ ಹೋರಾಟ ಮಾಡುವವವರು ಸಮಾಜಮುಖಿ ಆಗಲು ರಾಜ್ಯ ಸರಕಾರ ಹಲವು ಯೋಜನೆಗಳನ್ನು ಪ್ರಕಟಿಸಿದೆ ಎಂದರು.
ಸಮಾಜದಲ್ಲಿ ಗೌರವಯುತವಾಗಿ ಬದುಕಲು ಶರಣಾಗುವ ನಕ್ಸಲರಿಗೆ 7.50 ಲಕ್ಷ ರೂ. ನೀಡಲಾಗುವುದು. ಹೊರರಾಜ್ಯದ ನಕ್ಸಲರಿಗೆ 4 ಲಕ್ಷ ರೂ. ನೆರವು ನೀಡಲಾಗುವುದು ಎಂದು ಅವರು ಹೇಳಿದರು.
ನಕ್ಸಲರಿಗೆ ಜೀವನ ನಡೆಸಲು ಹಾಗೂ ಉದ್ಯೋಗ ತರಬೇತಿ ನೀಡಲಾಗುವುದು. ತರಬೇತಿ ಅವಧಿ ವೇಳೆ ಮಾಸಿಕ 5 ಸಾವಿರ ರೂ. ಗೌರವಧನ ನೀಡಲಾಗುವುದು. ತರಬೇತಿ ಅವಧಿಯ ಎರಡು ವರ್ಷಗಳ ಕಾಲ ಮಾಸಿಕ 5 ಸಾವಿರ ರೂ. ನೀಡಲಾಗುವುದು ಎಂದು ಅವರು ಹೇಳಿದರು.
ಮಾಜಿ ನಕ್ಸಲರ ಜೊತೆ ಚರ್ಚೆ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡಲು ಪ್ರಯತ್ನಗಳು ನಡೆದಿವೆ. ಶರಣಾಗುವ ನಕ್ಸಲರು ಬದುಕು ಕಟ್ಟಿಕೊಂಡು ಸಮಾಜದಲ್ಲಿ ಗೌರವಯುತವಾಗಿ ಬಳಲು ಸೂಕ್ತ ನೆರವು ನೀಡಲಾಗುವುದು ಎಂದು ವಿಕ್ರಮ್ ಅಮ್ಟೆ ತಿಳಿಸಿದರು.
ಚಿಕ್ಕಮಗಳೂರು ಸೇರಿದಂತೆ ಮಲೆನಾಡಿನ ದಟ್ಟ ಕಾಡುಗಳಲ್ಲಿ ಇತ್ತೀಚೆಗೆ ನಕ್ಸಲ್ ಚಟುವಟಿಕೆ ಹೆಚ್ಚಾಗಿದ್ದು, ಕೆಲವು ದಿನಗಳ ಹಿಂದೆ ನಡೆದ ಕಾರ್ಯಾಚರಣೆಯಲ್ಲಿ ನಕ್ಸಲರನ್ನು ಹತ್ಯೆಗೈಯ್ಯಲಾಗಿತ್ತು. ಇನ್ನು ಕೆಲವು ನಕ್ಸಲರು ಪರಾರಿ ಆಗಿದ್ದರು.
ಕೇರಳ ಸೇರಿದಂತೆ ಮೂರು ರಾಜ್ಯಗಳ ಗಡಿಯಲ್ಲಿ ಇತ್ತೀಚೆಗೆ ನಕ್ಸಲರು ಕಾಣಿಸಿಕೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ನಕ್ಸಲರು ಶರಣಾಗಲು ಮನವಿ ಮಾಡಿದ್ದರು.