ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೊಸ ವರ್ಷಾಚರಣೆಗೆ ಮಾರ್ಗಸೂಚಿ ಹೊರಡಿಸಲಾಗಿದ್ದು, ಮುಳ್ಳಯ್ಯನಗಿರಿ ಮುಂತಾದ ಪ್ರವಾಸಿ ತಾಣಗಳಿಗೆ ನಿರ್ಬಂಧ ವಿಧಿಸಲಾಗಿದೆ.
ಚಿಕ್ಕಮಗಳೂರು ಎಸ್ ಪಿ ವಿಕ್ರಮ್ ಅಮ್ಟೆ ಸೋಮವಾರ ಹೊಸ ವರ್ಷಾಚರಣೆಗೆ ಮಾರ್ಗಸೂಚಿ ಹೊರಡಿಸಿದ್ದು, ನಾಳೆ ಸಂಜೆ ಅಂದರೆ ಡಿಸೆಂಬರ್ 31ರ ಸಂಜೆ 6 ಗಂಟೆಯಿಂದ ಜನವರಿ 1 ಸಂಜೆ 6 ಗಂಟೆಯವರೆಗೆ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಹಾಗೂ ಲಾಡ್ಜ್, ರೆಸ್ಟೋರೆಂಟ್ ಹಾಗೂ ಪಬ್ ಗಳ ಮಾಲೀಕರ ಸಭೆ ಕರೆಯಲಾಗಿದ್ದು, ಮದ್ಯ ಮಾರಾಟದ ಬಗ್ಗೆ ನಿಬಂಧನೆಗಳನ್ನು ತಿಳಿಸಲಾಗಿದೆ. ರೇವ್ ಪಾರ್ಟಿ, ಡ್ರಗ್ಸ್ ಪಾರ್ಟಿ ನಡೆದರೆ ಗಮನಕ್ಕೆ ತರುವಂತೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.
ಪಾರ್ಟಿಗಳ ಮೇಲೆ ಯಾವುದೇ ಸಂಘಟನೆಗಳು ದಾಳಿ ಮಾಡದಂತೆ ಸೂಚಿಸಲಾಗಿದೆ. ಒಂದು ವೇಳೆ ಪಾರ್ಟಿಗಳ ಮೇಲೆ ಅನುಮಾನವಿದ್ದರೆ ಪೊಲೀಸರಗ ಗಮನಕ್ಕೆ ತರಬೇಕು ಎಂದು ಅವರು ಸ್ಪಷ್ಟಪಡಿಸಿದರು.
ಪಾರ್ಟಿ ನೆಪದಲ್ಲಿ ರಾತ್ರಿ ವೇಳೆ ಡಿಜೆ ಸೌಂಡ್ ಹಾಕುವಂತಿಲ್ಲ. ಮದ್ಯ ಸೇವಿಸಿ ವಾಹನ ಚಲಾಯಿಸುವಂತಿಲ್ಲ. ಇವರ ಮೇಲೆ ನಿಗಾ ಇಡಲಾಗಿದ್ದು, ಅಂತಹವರ ಮೇಲೆ ದಂಡ ವಿಧಿಸಲು ಪೊಲೀಸರ ಗಸ್ತು ನಿಯೋಜಿಸಲಾಗುವುದು ಎಂದು ಎಸ್ ಪಿ ವಿವರಿಸಿದರು.