ಶಿವಮೊಗ್ಗ: ಸಾಗುವಾನಿ ನಾಟ ಅಕ್ರಮ ಕಡಿತಲೆ, ರಕ್ಷಣೆ ಮಾಡದೇ ಕರ್ತವ್ಯ ನಿರ್ಲಕ್ಷ್ಯ, ಕಡಿತಲೆ ಮಾಡಿದ್ದ ನಾಟ ವಶಪಡಿಸಿಕೊಳ್ಳುವಲ್ಲಿ ನಿರ್ಲಕ್ಷ್ಯ ತೋರಿದ ಆರೋಪದಡಿ ಉಳ್ಳೂರು ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಸುಂದರಮೂರ್ತಿ ಎನ್.ಜಿ ಹಾಗೂ ಪ್ರಭಾರ ಗಸ್ತು ಅರಣ್ಯ ಪಾಲಕ ಪ್ರವೀಣ್ ಕುಮಾರ್ ಅವರನ್ನು ಅಮಾನತುಗೊಳಿಸಲಾಗಿದೆ.
ಈ ಸಂಬಂಧ ಶಿವಮೊಗ್ಗದ ಶಿಸ್ತು ಪ್ರಾಧಿಕಾರಿ ಹಾಗೂ ಮುಖ್ಯ ಅರಣ್ಯಾಧಿಕಾರಿ, ಸಂರಕ್ಷಣಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಅದರಲ್ಲಿ ಕಾಸ್ವಾಡಿ ಗ್ರಾಮದ ಸರ್ವೇ ನಂ.4ರ ಮಳಲಿ ರಾಜ್ಯ ಅರಣ್ಯ ಪ್ರದೇಶ, ಸರ್ವೇ ನಂ.21ರಲ್ಲಿ 7 ಸಾಗುವಾನಿ ಮರಗಳ ಅಕ್ರಮ ಕಡಿತಲೆಯಾಗಿದೆ. ಪ್ರಕರಣ ತಡೆಯುವಲ್ಲಿ ಇಬ್ಬರು ಅಧಿಕಾರಿಗಳು ವಿಫಲವಾಗಿದ್ದಾರೆ. ಅಲ್ಲದೇ ಪ್ರಕರಣ ದಾಖಲಿಸುವಲ್ಲಿಯೂ ವಿಳಂಬ ತೋರಿದ್ದಾರೆ. ಜೊತೆಗೆ ಈವರೆಗೂ ಪೂರ್ಣ ಪ್ರಮಾಣದ ಸ್ವತ್ತನ್ನು ಪತ್ತೆ ಹಚ್ಚಿ ವಶಪಡಿಸಿಕೊಂಡಿಲ್ಲ ಎಂದಿದ್ದಾರೆ.
ಪ್ರೀತಮ್ ಗೌಡ ಎನ್ನುವವರ ಮನೆಯ ಸಮೀಪ ಮುಚ್ಚಿಟ್ಟಿದ್ದರೆನ್ನಲಾದ ಹಲವು ಸಾಗುವಾನಿ ತುಂಡುಗಳನ್ನು ಸಿಬ್ಬಂದಿಗಳು ವಶಪಡಿಸಿಕೊಂಡು, ಇವು ಕಾಸ್ಪಾಡಿ ಗ್ರಾಮದ ಸರ್ವೇ ನಂ.4 ಮತ್ತು 21ರಲ್ಲಿ ಕಡಿತಲೆಯಾದ ಬುಡಗಳಿಗೆ ಸಂಬಂಧಿಸಿದ ಬುಡಗಳೆಂದು ಸಿಬ್ಬಂದಿಗಳಉ ಹೇಳಿಕೊಂಡಿದ್ದಾರೆ. ಆದರೇ ವಾಸ್ತವದಲ್ಲಿ ಬುಡಗಳಿಗೂ, ವಶಪಡಿಸಿಕೊಂಡ ತುಂಡುಗಳಿಗೂ ಹೊಂದಿಕೆಯಾಗುತ್ತಿಲ್ಲ. ಈ ತುಂಡುಗಳಿಗೆ ಸಂಬಂಧಿಸಿದ ಬುಡಗಳು ಪತ್ತೆಯಾಗಿರುವುದಿಲ್ಲ ಅಂತ ಹೇಳಿದ್ದಾರೆ.
ಕಾಸ್ವಾಡಿ ಗ್ರಾಮದ ಕಣಿಕೆಗೌಡ ಹಾಗೂ ಪ್ರೀತಮ್ ಗೌಡ ಎನ್ನುವವರ ಆಡಿಯೋ ಸಂಭಾಷಣೆಯ ತುಣುಕುಗಳಲ್ಲಿ ಅಕ್ರಮ ಕಡಿತಲೆ, ದಾಸ್ತಾನು, ಸಾಗಾಣಿಕೆಗಳನ್ನು ಸಿಬ್ಬಂದಿಗಳೇ ನಡೆಸಿರುವುದಾಗಿ ಸಂಭಾಷಣೆ ನಡೆಸಿರುತ್ತಾರೆ. ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ವರದಿ ಹಾಗೂ ಆಡಿಯೋ ಸಂಭಾಷಣೆಯ ತುಣುಕುಗಳಿಂದ ಉಳ್ಳೂರು ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಸುಂದರ ಮೂರ್ತಿ ಎನ್.ಜಿ ಹಾಗೂ ಪ್ರಭಾರ ಗಸ್ತು ಅರಣ್ಯ ಪಾಲಕ ಪ್ರವೀಣ್ ಕುಮಾರ್.ಈ ಇವರು ಉಳ್ಳೂರು ಶಾಖೆ ಮತ್ತು ಗಸ್ತುಗಳಲ್ಲಿನ ಅಕ್ರಮ ಸಾಗುವಾನಿ ಮರ ಕಡಿತಲೆ ಪ್ರಕರಣಗಳಲ್ಲಿ ಶಾಮೀಲಾಗಿ ಕರ್ತವ್ಯ ಲೋಪ ಎಸಗಿದ್ದಾರೆನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಂಡುಬಂದಿರುತ್ತದೆ ಎಂದಿದ್ದಾರೆ.
ಈ ಎಲ್ಲಾ ಅಂಶಗಳಿಂದ ಹಾಗೂ ಉಳ್ಳೂರು ಶಾಖೆ ಮತ್ತು ಗಸ್ತುಗಳಲ್ಲಿ ಅಕ್ರಮ ಸಾಗುವಾನಿ ಮರಕಡಿತಲೆ ಸಂಬಂಧಿಸಿದಂತೆ ಎಷ್ಟು ಮರಗಳ ಕಟಾವಣೆಯಾಗಿದೆ? ಎಷ್ಟು ಪ್ರಕರಣಗಳಲ್ಲಿ ತಕ್ಷೀರು ದಾಖಲಿಸಲಾಗಿದೆ? ಈವರೆಗೆ ಎಷ್ಟು ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ? ಇನ್ನೆಷ್ಟು ಸ್ವತ್ತನ್ನು ವಶಪಡಿಸಿಕೊಳ್ಳುವುದು ಬಾಕಿ ಇದೆ? ಸರ್ಕಾರಕ್ಕೆ ಎಷ್ಟು ನಷ್ಟ ಉಂಟಾಗಿದೆ ಎನ್ನುವ ಅಂಶಗಳ ಕುರಿತು ತನಿಖೆ ಪ್ರಗತಿಯಲ್ಲಿರುತ್ತದೆ ಎಂಬುದಾಗಿ ತಿಳಿಸಿದ್ದಾರೆ.
ಪೂರ್ಣ ಪ್ರಮಾಣದ ತನಿಖಾ ವರದಿ ಸಲ್ಲಿಕೆಯು ಬಾಕಿ ಇರುವುದರಿಂದ ನೌಕರರು ಅದೇ ಸ್ಥಳದಲ್ಲಿ ಕರ್ತವ್ಯವನ್ನು ಮುಂದುವರೆಸಿದಲ್ಲಿ ಪ್ರಕರಣದ ತನಿಖೆಗೆ ಅಡ್ಡಿ ಉಂಟು ಮಾಡುವ ಹಾಗೂ ಸಾಕ್ಷ್ಯಗಳನ್ನು ನಾಶ ಮಾಡುವ ಸಾಧ್ಯತೆಗಳಿರುತ್ತವೆ ಎಂದಿದ್ದಾರೆ.
ಈ ಎಲ್ಲಾ ಕಾರಣದಿಂದಾಗಿ ಪ್ರಕರಣದಲ್ಲಿ ನೌಕರರ ಶಾಮೀಲಾತಿಯ ಬಗೆಗಿನ ಆರೋಪಗಳು ಮೇಲ್ನೋಟಕ್ಕೆ ಸಂತ್ಯಾಂಶಗಳಿಂದ ಕೂಡಿರುವುದಾಗಿ ಕಂಡು ಬಂದಿದೆ. ಈ ಹಿನ್ನಲೆಯಲ್ಲಿ ಸುಂದರಮೂರ್ತಿ ಎನ್.ಜಿ, ಉಪ ವಲಯ ಅರಣ್ಯಾಧಿಕಾರಿ ವ ಮೋಜಣಿದಾರ, ಉಳ್ಳೂರು ಶಾಖೆ ಮತ್ತು ಪ್ರವೀಣ್ ಕುಮಾರ್.ಈ, ಗಸ್ತು ಅರಣ್ಯಪಾಲಕ, ಉಳ್ಳೂರು ಗಸ್ತು(ಪ್ರಭಾರ) ಇವರುಗಳನ್ನು ಕರ್ನಾಟಕ ಅರಣ್ಯ ಸಂಹಿತೆ 1976ರ ನಿಯಮ 124 ಮತ್ತು 125ರ ಉಪ ನಿಯಮ (ii), (iii), (iv), (v), (vi), (xi), (xii)ರಲ್ಲಿ ಒಟ್ಟು ಉಪ ವಲಯ ಅರಣ್ಯಾಧಿಕಾರಿ ಮತ್ತು ಗಸ್ತು ಅರಣ್ಯ ಪಾಲಕರುಗಳಿಗೆ ನಿಗಧಿಪಡಿಸಿದ ಕರ್ತವ್ಯಗಳನ್ನು ನಿರ್ಹಿಸದೇ ಕರ್ನಾಟಕ ನಾಗರೀಕ ಸೇವಾ(ನಡತೆ) ನಿಯಮಾವಳಿ 2021 (ತಿದ್ದುಪಡಿ)ರ ನಿಯಮ 3(1)(i)(ii)(iii) ಅನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ ಎಂದು ಹೇಳಿದ್ದಾರೆ.
ಈ ಬಗ್ಗೆ ನಿಯಮಾನುಸಾರ ಸ್ವತಂತ್ರ ಇಲಾಖಾ ವಿಚಾರಣೆ ಪ್ರಕ್ರಿಯೆಯನ್ನು ನಡೆಸಬೇಕಾಗಿದ್ದು, ಇದಕ್ಕೆ ಆಡಳಿತಾತ್ಮಕ ಹಿತದೃಷ್ಟಿಯಿಂದ ಇವರುಗಳ ವಿರುದ್ಧ ಜಂಟಿ ಇಲಾಖಾ ವಿಚಾರಣೆ ಬಾಕಿ ಇರಿಸಿಕೊಂಡು, ಇವರುಗಳನ್ನು ಸೇವೆಯಿಂದ ಅಮಾನತ್ತಿನಲ್ಲಿಡಬೇಕಾಗಿರುತ್ತದೆ ಎಂಬುದಾಗಿ ತಿಳಿಸಿ ಈ ಕೆಳಕಂಡಂತೆ ಆದೇಶಿಸಿದ್ದಾರೆ.
ಪ್ರಸ್ತಾವನೆಯಲ್ಲಿ ವಿವರಿಸಿದ ಅಂಶಗಳ ಹಿನ್ನಲೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ, ಅರಣ್ಯ ಸಾಗರ ವಿಭಾಗ, ಸಾಗರ ಇವರ ಪ್ರಾಥಮಿಕ ತನಿಖಾ ವರದಿ ಮತ್ತು ಶಿಫಾರಸ್ಸಿನಂತೆ, ಸುಂದರಮೂರ್ತಿ ಎನ್.ಜಿ., ಉಪ ವಲಯ ಅರಣ್ಯಾಧಿಕಾರಿ ವ ಮೋಜಣಿದಾರ, ಉಳ್ಳೂರು ಶಾಖೆ ಮತ್ತು ಪ್ರವೀಣ್ ಕುಮಾರ್,ಈ., ಗಸ್ತು ಅರಣ್ಯ ಪಾಲಕ ಉಳ್ಳೂರು ಗಸ್ತು (ಪ್ರಭಾರ) ಇವರುಗಳು ಕರ್ನಾಟಕ ಅರಣ್ಯ ಸಂಹಿತೆ 1976ರ ನಿಯಮ 124 ಮತ್ತು 125 ರ ಉಪ ನಿಯಮ(ii), (iii), (iv), (v), (vi), (xi), (xii) ರಲ್ಲಿ ಒಟ್ಟು ಉಪ ವಲಯ ಅರಣ್ಯಾಧಿಕಾರಿ ಮತ್ತು ಗಸ್ತು ಅರಣ್ಯ ಪಾಲಕರುಗಳಿಗೆ ನಿಗಧಿಪಡಿಸಿದ ಕರ್ತವ್ಯಗಳನ್ನು ನಿರ್ವಹಿಸದ ಕರ್ನಾಟಕ ನಾಗರೀಕ ಸೇವಾ (ನಡತೆ) ನಿಯಮಾವಳ 2021 (ತಿದ್ದುಪಡಿ) ರ ನಿಯಮ 3(1)(i)(ii)(iii) ನ್ನು ಉಲ್ಲಂಘಿಸಿರುವುದರಿಂದ, ಕರ್ನಾಟಕ ಸಿವಿಲ್ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಅಫಿಲು) ನಿಯಮಾವಳಿ 1957 ರ ನಿಯಮ 10(1)ಡಿ ರಲ್ಲಿ ಈ ಕೆಳ ಸಹಿದಾರರಿಗೆ ದತ್ತವಾದ ಅಧಿಕಾರದಂತೆ ಸುಂದರಮೂರ್ತಿ ಎನ್.ಜಿ., ಉಪ ವಲಯ ಅರಣ್ಯಾಧಿಕಾರಿ ವ ಮೋಜಣಿದಾರ, ಉಳ್ಳೂರು ಶಾಖೆ ಮತ್ತು ಪ್ರವೀಣ್ ಕುಮಾರ್,ಈ., ಗಸ್ತು ಅರಣ್ಯ ಪಾಲಕ ಉಳ್ಳೂರು ಗಸ್ತು (ಪ್ರಭಾರ) ಇವರುಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅವರ ಮೇಲಿನ ಜಂಟಿ ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ ಕರ್ತವ್ಯದಿಂದ ಅಮಾನತ್ತು ಪಡಿಸಿ ಆದೇಶಿಸಿದ್ದಾರೆ.
ಅಮಾನತ್ತಿನ ಅವಧಿಯಲ್ಲಿ ಸದರಿ ನೌಕರರು ಕರ್ನಾಟಕ ನಾಗರೀಕ ಸೇವಾ ನಿಯಮಾವಳ 1957 ರ ನಿಯಮ 97 (ಎ) ಮತ್ತು 104(1) ರ ನಿಬಂಧನೆಗೊಳಪಟ್ಟು ನಿಯಮ 98 (1)ರ ಮೇರೆಗೆ ಜೀವನಾಧಾರ ಭತ್ಯೆ ಪಡೆಯಲು ಅರ್ಹರಿರುತ್ತಾರೆ ಹಾಗೂ ಅಮಾನತ್ತಿನ ಅವಧಿಯಲ್ಲಿ ವಲಯ ಕಛೇರಿಯನ್ನು ಕೇಂದ್ರಸ್ಥಾನವನ್ನಾಗಿ ನಿಗಧಿಪಡಿಸಿದ್ದು, ಅನುಮತಿಯಿಲ್ಲದೇ ಕೇಂದ್ರಸ್ಥಾನವನ್ನು ಬಿಡಬಾರದಾಗಿ ಸೂಚಿಸಿದ್ದಾರೆ.