ನವದೆಹಲಿ: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕ್ಯಾತೆ ಮುಂದುವರೆಸಿರುವ ನೆರೆ ರಾಜ್ಯ ತಮಿಳುನಾಡು ಮೇಕೆದಾಟು ಯೋಜನೆಗೆ ಲೋಕಸಭೆಯಲ್ಲಿ ಡಿಎಂಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಸಂಸತ್ ಕಲಾಪ ಆರಂಭವಾಗುತ್ತಿದ್ದಂತೆಯೇ ವಿಷಯ ಪ್ರಸ್ತಾಪ ಮಾಡಿದ ಡಿಎಂಕೆ ಸಂಸದರು ಮೇಕೆದಾಟು ವಿಚಾರವಾಗಿ ನಿಲುವಳಿ ಸೂಚನೆಗೆ ಅವಕಾಶ ಕೋರಿ ತಕ್ಷಣವೇ ಚರ್ಚೆ ನಡೆಸಬೇಕು ಎಂದು ಪಟ್ಟು ಹಿಡಿದರು.
ಡಿಎಂಕೆ ಸಂಸದೀಯ ಮಂಡಳಿ ನಾಯಕ ಟಿ.ಆರ್.ಬಾಲು ನೇತೃತ್ವದಲ್ಲಿ ಸಂಸದರು ಪಟ್ಟು ಹಿಡಿದು ನಿಲುವಳಿ ಸೂಚನೆಗೆ ಒತ್ತಾಯಿಸಿದ್ದು, ಪ್ರಸ್ತಾವನೆಗೆ ಸ್ಪೀಕರ್ ಓಂ ಬಿರ್ಲಾ ನಿರಾಕರಿಸಿದ ಕಾರಣ ಲೋಕಸಭೆ ಸದನದ ಬಾವಿಗಿಳಿದು ಡಿಎಂಕೆ ಸಂಸದರು ಪ್ರತಿಭಟನೆ ನಡೆಸಿದ್ದಾರೆ.
ಬರದ ನಡುವೆಯೂ ನೀರು ಬಿಡುವಂತೆ ಕಾವೇರಿ ನೀರು ಹರಿಸುವಂತೆ ತಮಿಳುನಾಡು ಸರ್ಕಾರ ಪಟ್ಟು ಹಿನ್ನೆಲೆಯಲ್ಲಿ ಬುಧವಾರ ದೆಹಲಿಯಲ್ಲಿ ಉನ್ನತ ಮಟ್ಟದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ನಿಗದಿಯಾಗಿದೆ.
ಕಳೆದ ವಾರವಷ್ಟೇ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆ ನಡೆದಿತ್ತು. ಆದರೆ ಈ ವೇಳೆ ಕರ್ನಾಟಕಕ್ಕೆ ನೀರು ಹರಿಸುವ ಬಗ್ಗೆ ಯಾವುದೇ ಸೂಚನೆಯನ್ನು ಸಿಡಬ್ಲೂಆರ್ ಸಿ ನೀಡಿರಲಿಲ್ಲ. ಹೀಗಾಗಿ ಸಿಡಬ್ಲೂಆರ್ ಸಿ ನಿರ್ಧಾರಕ್ಕೆ ತಮಿಳುನಾಡು ಅಸಮಾಧಾನ ವ್ಯಕ್ತಪಡಿಸಿದ್ದು, ಶೀಘ್ರ ಪ್ರಾಧಿಕಾರದ ಸಭೆ ಕರೆಯುವಂತೆ ಮನವಿ ಮಾಡಿತ್ತು.
ಹೀಗಾಗಿ ಜುಲೈ 22ರಂದು ದೆಹಲಿಯಲ್ಲಿ ಜಿಡಬ್ಲ್ಯೂಎಂಎ ಮೀಟಿಂಗ್ ನಡೆಯಲಿದೆ. ಕೇಂದ್ರ ಜಲ ಆಯೋಗದ ಅಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಸಿಡಬ್ಲ್ಯುಆರ್ಸಿಗಿಂತ ಉನ್ನತ ಅಧಿಕಾರವನ್ನು ಜಿಡಬ್ಲ್ಯೂಎಂಎ ಹೊಂದಿದೆ ಎನ್ನುವುದಿಲ್ಲಿ ಗಮನಾರ್ಹಯಾಗಿದೆ.
ಕರ್ನಾಟಕದ ವಾದ
ಕೆಆರ್ಎಸ್ನಿಂದ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲವೆಂದು ಸಿಡಬ್ಲ್ಯೂ ಆರ್ ಸಿ ಸಭೆಯಲ್ಲಿ ಕರ್ನಾಟಕ ವಾದಿಸಿತ್ತು. ಕಾವೇರಿ ಕೊಳ್ಳದಲ್ಲಿ ಮಳೆ ಅಭಾವ ಆಗಿದೆ. ಜೂನ್ ತಿಂಗಳಲ್ಲಿ ಜಲಾಶಯಗಳಿಗೆ ಶೂನ್ಯ ಒಳಹರಿವಿದ್ದು, ಜುಲೈ ತಿಂಗಳಲ್ಲಿ ಹಲವೆಡೆ ಸ್ವಲ್ಪ ಪ್ರಮಾಣದಲ್ಲಿ ಮಳೆಯಾಗಿದೆ. ಇದರಿಂದ ಬರಿದಾದ ಡ್ಯಾಂಗಳಿಗೆ ಸ್ವಲ್ಪ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ. ಈ ನಡುವೆ ಮಾನ್ಸೂನ್ ಮತ್ತೆ ಚುರುಕು ಪಡೆಯುವ ಯಾವ ಮುನ್ಸೂಚನೆ ಇಲ್ಲ. ಹೀಗಾಗಿ ಸದ್ಯ ಸಂಗ್ರಹವಿರುವ ನೀರನ್ನು ಮುಂದಿನ ಮಾನ್ಸೂನ್ವರೆಗೂ ಕುಡಿಯಲು ಬಳಸಿಕೊಳ್ಳಬೇಕು. ಕರ್ನಾಟಕದಲ್ಲಿ ರೈತರು ಕೃಷಿಗೆ ನೀರು ಕೇಳುತ್ತಿದ್ದಾರೆ, ಆದರೆ ನಾವು ಬಿಡುತ್ತಿಲ್ಲ. ರಾಜ್ಯದಲ್ಲಿ ಸಂಪೂರ್ಣ ಬರ ಆವರಿಸಿದೆ. ಹೀಗಾಗಿ ತಮಿಳುನಾಡಿಗೆ ನೀರು ಬಿಡಲು ಸಾಧ್ಯವೇ ಇಲ್ಲ. ನಮಗೆ ಇಲ್ಲಿ ಕುಡಿಯಲೂ ನೀರಿಲ್ಲ ಎಂದು ಕರ್ನಾಟಕ ತಿಳಿಸಿತ್ತು.



