Monday, June 1, 2026
Google search engine
Homeಕ್ರೀಡೆವೈಭವ್‌ ಸೂರ್ಯವಂಶಿಗೆ ಐಪಿಎಲ್‌ ನಲ್ಲಿ ಸಿಕ್ಕ ಪ್ರಶಸ್ತಿ, ಬಹುಮಾನ ಎಷ್ಟು ಗೊತ್ತಾ?

ವೈಭವ್‌ ಸೂರ್ಯವಂಶಿಗೆ ಐಪಿಎಲ್‌ ನಲ್ಲಿ ಸಿಕ್ಕ ಪ್ರಶಸ್ತಿ, ಬಹುಮಾನ ಎಷ್ಟು ಗೊತ್ತಾ?

ಐಪಿಎಲ್‌ ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್‌ ಮೂಲಕ ದಾಖಲೆಗಳನ್ನು ಪುಡಿಗಟ್ಟಿ ಸಂಚಲನ ಸೃಷ್ಟಿಸಿರುವ 15 ವರ್ಷದ ಬಾಲಕ ವೈಭವ್‌ ಸೂರ್ಯವಂಶಿ ಹಲವು ಪ್ರಮುಖ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಇದರಿಂದ ಪ್ರಶಸ್ತಿ ಜೊತೆಗೆ ದೊಡ್ಡ ಮೊತ್ತವನ್ನೂ ಜೇಬಿಗಿಳಿಸಿಕೊಂಡಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಅತೀ ಹೆಚ್ಚು ರನ್‌ ಗಳಿಸುವ ಮೂಲಕ ಆರೇಂಜ್‌ ಕ್ಯಾಪ್‌ ಪಡೆದಿದ್ದು, ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ವಿಶೇಷ ಅಂದರೆ ಆರೆಂಜ್‌ ಕ್ಯಾಪ್‌ ಮಾತ್ರವಲ್ಲ. ಸರಣಿ ಶ್ರೇಷ್ಠ, ಅತ್ಯಂತ ವೇಗವಾಗಿ ರನ್‌ ಗಳಿಸಿದ್ದು, ಅತೀ ಹೆಚ್ಚು ಸಿಕ್ಸರ್‌ ಬಾರಿಸಿದ್ದು ಸೇರಿದಂತೆ ಒಟ್ಟಾರೆ ೫ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ.

ವೈಭವ್ ಸೂರ್ಯವಂಶಿ 16 ಪಂದ್ಯಗಳಲ್ಲಿ ಒಂದು ಶತಕ ಸೇರಿದಂತೆ 776 ರನ್ ಸಿಡಿಸಿ ಈ ಸಾಧನೆ ಮಾಡಿದ್ದಾರೆ. ಕಳೆದ ವರ್ಷ (2025) ಗುಜರಾತ್ ಟೈಟನ್ಸ್ ತಂಡದ ಸಾಯಿ ಸುದರ್ಶನ್ 15 ಪಂದ್ಯಗಳಲ್ಲಿ 759 ರನ್ ಗಳಿಸಿ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದರು. ಆಗ ಸುದರ್ಶನ್ ಅವರಿಗೆ 23 ವರ್ಷ 231 ದಿನಗಳಾಗಿತ್ತು. ಇದೀಗ ಕೇವಲ 15 ವರ್ಷದ ಪ್ರಾಯದಲ್ಲೇ ವೈಭವ್ ಈ ದಾಖಲೆಯನ್ನು ಧೂಳೀಪಟ ಮಾಡಿದ್ದಾರೆ.

ಕೇವಲ ಆರೆಂಜ್ ಕ್ಯಾಪ್ ಮಾತ್ರವಲ್ಲದೆ, ಇಡೀ ಟೂರ್ನಿಯಲ್ಲಿ ತಮ್ಮ ಬ್ಯಾಟಿಂಗ್ ಅಬ್ಬರದಿಂದ ಧೂಳೆಬ್ಬಿಸಿದ ವೈಭವ್ ಸೂರ್ಯವಂಶಿ ಒಟ್ಟು 5 ಪ್ರಮುಖ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಆರೆಂಜ್ ಕ್ಯಾಪ್: ಟೂರ್ನಿಯಲ್ಲಿ ಅತ್ಯಧಿಕ 776 ರನ್ ಗಳಿಕೆ – 10 ಲಕ್ಷ ರೂ.
ಟೂರ್ನಿಯ ಶ್ರೇಷ್ಠ ಆಟಗಾರ: ಒಟ್ಟು 436.5 ಪಾಯಿಂಟ್ಸ್ ಮೂಲಕ ಸರಣಿ ಶ್ರೇಷ್ಠ ಗೌರವ – 15 ಲಕ್ಷ ರೂ.
ಸೂಪರ್ ಸ್ಟ್ರೈಕರ್: 237.3 ರ ಸ್ಟ್ರೈಕ್‌ ರೇಟ್‌ನಲ್ಲಿ ರನ್ ಚಚ್ಚಿದ ಹಿರಿಮೆ – ಟಾಟಾ ಸಿಯೆರಾ ಕಾರು
ಸೂಪರ್ ಸಿಕ್ಸರ್: 75 ಸಿಕ್ಸರ್‌ಗಳನ್ನು ಸಿಡಿಸಿ ಈ ಪ್ರಶಸ್ತಿ ಜಯಿಸಿದ್ದಾರೆ – 10 ಲಕ್ಷ ರೂ.
ಉದಯೋನ್ಮುಖ ಆಟಗಾರ: ಟೂರ್ನಿಯ ಅತ್ಯುತ್ತಮ ಉದಯೋನ್ಮುಖ ಆಟಗಾರ ಪ್ರಶಸ್ತಿಯೂ ಇವರ ಪಾಲಾಗಿದ್ದು 10 ಲಕ್ಷ ರೂ. ನಗದು ಬಹುಮಾನ ಪಡೆದಿದ್ದಾರೆ.

ಈ ಮೂಲಕ ಒಟ್ಟು 45 ಲಕ್ಷ ರೂ. ನಗದು ಜೊತೆಗೆ ಜೊತೆಗೆ ಟಾಟಾ ಸಿಯೆರಾ ಕಾರನ್ನು ಸೂರ್ಯವಂಶಿ ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಹದಿನೈದರ ಹರೆಯದಲ್ಲೇ ಅನುಭವಿ ಬೌಲರ್‌ಗಳನ್ನು ಮನಬಂದಂತೆ ದಂಡಿಸಿ, ಒಂದೇ ಐಪಿಎಲ್ ಆವೃತ್ತಿಯಲ್ಲಿ 5 ಪ್ರಮುಖ ಪ್ರಶಸ್ತಿಗಳನ್ನು ಬಾಚಿಕೊಂಡ ವೈಭವ್ ಸೂರ್ಯವಂಶಿ ಅವರ ಈ ಅಪ್ರತಿಮ ಸಾಧನೆ ಕ್ರಿಕೆಟ್ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.

ವೈಭವ್‌ ಸೂರ್ಯವಂಶಿಯನ್ನು ಕಳೆದ ವರ್ಷ ರಾಜಸ್ಥಾನ್‌ ರಾಯಲ್ಸ್‌ ತಂಡ 1.10ಕೋಟಿ ರೂ.ಗೆ ಖರೀದಿಸಿತ್ತು. ಈ ಬಾರಿ ಅದೇ ಮೊತ್ತಕ್ಕೆ ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. 16 ಪಂದ್ಯಗಳನ್ನು ಆಡಿರುವ ಸೂರ್ಯವಂಶಿ, 1.20 ಕೋಟಿ ರೂ. ಪಡೆಯಲಿದ್ದಾರೆ. ಅಲ್ಲದೇ ಒಟ್ಟಾರೆ ಬಹುಮಾನ ಮೊತ್ತ 45 ಲಕ್ಷ ಹಾಗೂ ಪಂದ್ಯ ಶುಲ್ಕ ಸೇರಿದಂತೆ ಒಟ್ಟಾರೆ ಈ ಆವೃತ್ತಿಯಲ್ಲಿ 2.50 ಕೋಟಿ ರೂ. ಜೇಬಿಗಿಳಿಸಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments