ನಡೆಯಬಾರದ್ದು ನಡೆದು ಹೋಗಿದೆ. ಇದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ ಎಂದು ಪುಷ್ಪ-2 ಖ್ಯಾತಿಯ ತೆಲುಗು ನಟ ಅಲ್ಲು ಅರ್ಜುನ್ ಜೈಲಿನಿಂದ ಬಿಡುಗಡೆ ಆಗುತ್ತಿದ್ದಂತೆ ಮಾಧ್ಯಮಗಳ ಮುಂದೆ ಹೇಳಿದ್ದಾರೆ.
ಶುಕ್ರವಾರ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಅನಿರೀಕ್ಷಿತವಾಗಿ ಬಂಧನಕ್ಕೆ ಒಳಗಾದ ಅಲ್ಲು ಅರ್ಜುನ್ ಗೆ ತೆಲಂಗಾಣ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು. ಆದರೆ ಜಾಮೀನು ದಾಖಲೆಗಳು ತಲುಪಲು ತಡವಾಗಿದ್ದರಿಂದ ಅಲ್ಲು ಅರ್ಜುನ್ ಒಂದು ರಾತ್ರಿ ಜೈಲಿನಲ್ಲಿ ಕಳೆಯಬೇಕಾಯಿತು.
ಶನಿವಾರ ಬೆಳಿಗ್ಗೆ ಬಿಡುಗಡೆ ಆಗುತ್ತಿದ್ದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅಲ್ಲು ಅರ್ಜುನ್, ಆಗಬಾರದ್ದು ಆಗಿಹೋಗಿದೆ. ನಡೆಯಬಾರದು ನಡೆದಿದೆ. ಆದರೆ ನಾನು ಈ ಘಟನೆಗೆ ಕ್ಷಮೆಯಾಚಿಸುತ್ತೇನೆ. ಮೃತ ಕುಟುಂಬಕ್ಕೆ ನಾನು ನೆರವಾಗುತ್ತೇನೆ ಎಂದು ಹೇಳಿದ್ದಾರೆ.
ನಾನು ಕಾನೂನು ಪಾಲಿಸುವ ನಾಗರಿಕ. ಹಾಗಾಗಿ ಪ್ರಕರಣದಲ್ಲಿ ತನಿಖೆಗೆ ಸಹಕರಿಸುತ್ತೇನೆ. ದುರಾದೃಷ್ಟವಶಾತ್ ಘಟನೆ ನಡೆದಿದೆ. ಇದಕ್ಕಾಗಿ ನಾನು ಮತ್ತೊಮ್ಮೆ ಮೃತ ಮಹಿಳೆಯ ಕುಟುಂಬದ ಕ್ಷಮೆಯಾಚಿಸುತ್ತೇನೆ ಎಂದು ಅವರು ಹೇಳಿದ್ಧಾರೆ.
ಕಳೆದ ವಾರ ಹೈದರಾಬಾದ್ ನ ಸಂಧ್ಯಾ ಥಿಯೇಟರ್ ನಲ್ಲಿ ಪುಷ್ಪ-2 ಚಿತ್ರದ ಪ್ರಿಮಿಯರ್ ಶೋ ವೇಳೆ ಉಂಟಾದ ನೂಕುನುಗ್ಗಲಿನಲ್ಲಿ ಮಹಿಳೆ ಮೃತಪಟ್ಟು, ಮಗ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ. ಈ ಘಟನೆಗೆ ಏಕಾಏಕಿ ಸ್ಥಳಕ್ಕೆ ಭೇಟಿ ನೀಡಿದ ಅಲ್ಲು ಅರ್ಜುನ್ ಕಾರಣ ಎಂದು ಆರೋಪಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ನಾಂಪಲ್ಲಿ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು. ಈ ವೇಳೆ ಕುಟುಂಬದವರು ಮಧ್ಯಂತರ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ತೆಲಂಗಾಣ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಅಲ್ಲದೇ ಒಬ್ಬ ನಟ ಎಂಬ ಕಾರಣಕ್ಕೆ ಈ ರೀತಿ ಬಂಧಿಸಿದ ಕ್ರಮ ಸರಿಯಲ್ಲ ಎಂದು ಅಭಿಪ್ರಾಯವ್ಯಕ್ತಪಡಿಸಿತ್ತು.
ಸಂಜೆ 5.30ರ ಸುಮಾರಿಗೆ ನ್ಯಾಯಾಲಯ ಜಾಮೀನು ನೀಡಿದ್ದರಿಂದ ದಾಖಲೆಗಳು ಪೊಲೀಸರಿಗೆ ತಲುಪಲು ತಡವಾಗಿದ್ದರಿಂದ ಅಲ್ಲಿ ಅರ್ಜುನ್ ಒಂದು ರಾತ್ರಿಯನ್ನು ಜೈಲಿನಲ್ಲಿ ಕಳೆಯಬೇಕಾಯಿತು.