ನಟಿ ರಮ್ಯಾ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ವಿದೇಶಾಂಗ ಸಚಿವ ಎಸ್ಎಂ ಕೃಷ್ಣಅಂತಿಮ ದರ್ಶನ ಪಡೆದಿದ್ದಾರೆ.
ಬೆಂಗಳೂರಿನ ಸದಾಶಿವ ನಗರದಲ್ಲಿರುವ ನಿವಾಸಕ್ಕೆ ಮಂಗಳವಾರ ಬೆಳಿಗ್ಗೆ ಆಗಮಿಸಿದ ನಟಿ ರಮ್ಯಾ, ಅಂತಿಮ ದರ್ಶನ ಪಡೆದರು.
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ರಮ್ಯಾ, ನಾನು ಮಾತನಾಡುವ ಸ್ಥಿತಿಯಲ್ಲಿ ಇಲ್ಲ ಎಂದಷ್ಟೇ ಹೇಳಿದರು.
ಮಂಡ್ಯ ಸಂಸದೆಯಾಗಿದ್ದ ರಮ್ಯಾ, ಅವರ ರಾಜಕೀಯ ಜೀವನ ರೂಪುಗೊಂಡಿದ್ದೂ ಎಸ್ಎಂ ಕೃಷ್ಣ ಅವರ ಮಾರ್ಗದರ್ಶನದಲ್ಲೇ ಎಂಬುದು ಮತ್ತೊಂದು ಗಮನಾರ್ಹ ಸಂಗತಿ.
ಇತ್ತೀಚೆಗೆ ಮಾಧ್ಯಮ ಹಾಗೂ ಸಾರ್ವಜನಿಕ ಜೀವನದಿಂದ ದೂರ ಇರುವ ನಟಿ ರಮ್ಯಾ, ಮಂಗಳವಾರ ದೀರ್ಘ ಸಮಯದ ನಂತರ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಭಾವೋದ್ವೇಗಕ್ಕೆ ಒಳಗಾಗಿದ್ದ ರಮ್ಯಾ, ಎಸ್.ಎಂ. ಕೃಷ್ಣ ಅವರ ಅಂತಿಮ ದರ್ಶನ ಪಡೆದು ಹಿಂತಿರುಗಿದರು.
ನಟ ಶಿವರಾಜ್ ಕುಮಾರ್, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಹಲವು ಚಿತ್ರರಂಗ ಹಾಗೂ ರಾಜಕೀಯ ಗಣ್ಯರು ಎಸ್.ಎಂ. ಕೃಷ್ಣ ಅವರ ಅಂತಿಮ ದರ್ಶನ ಪಡೆದರು.
ಎಸ್ಎಂ ಕೃಷ್ಣ ವಿಧಿವಶರಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಇಂದಿನಿಂದ 3 ದಿನಗಳ ಕಾಲ ಶೋಕಾಚರಣೆ ಘೋಷಣೆ ಮಾಡಿದ್ದು, ಇದೇ ವೇಳೆ ಬುಧವಾರ (ಡಿಸೆಂಬರ್ 11) ರಾಜ್ಯಾದ್ಯಂತ ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ.
ಡಿಸೆಂಬರ್ 10 ರಿಂದ ಡಿಸೆಂಬರ್ 12ರವರೆಗೆ ಶೋಕಾಚರಣೆಗೆ ಘೋಷಣೆ ಮಾಡಲಾಗಿದ್ದು, ಮೂರು ದಿನಗಳ ಕಾಲ ರಾಜ್ಯ ಸರ್ಕಾರದ ಎಲ್ಲಾ ಕಟ್ಟಡಗಳ ಮೇಲೆ ರಾಷ್ಟ್ರಧ್ವಜ ಅರ್ಧಕ್ಕೆ ಹಾರಿಸಿ ಅಗಲಿದ ಹಿರಿಯ ನಾಯಕನಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ.