ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಸೋಮವಾರ ಮಧ್ಯಾಹ್ನ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಿಂದ ಒಂದೂವರೆ ತಿಂಗಳ ನಂತರ ಹೊರಗೆ ಬಂದಿದ್ದು, ಸೆಷನ್ಸ್ ಕೋರ್ಟ್ ಗೆ ಹಾಜರಾಗಿದ್ದಾರೆ.
ಹೈಕೋರ್ಟ್ ಜಾಮೀನು ನೀಡಿದ ಹಿನ್ನೆಲೆಯಲ್ಲಿ ಶ್ಯೂರಿಟಿ ಬಾಂಡ್ ಗೆ ಸಹಿ ಹಾಕಲು ಪತ್ನಿ ವಿಜಯಲಕ್ದ್ಮೀ ಹಾಗೂ ನಟ ಧನ್ವೀರ್ ಜೊತೆ ಹೊರಗೆ ಬಂದಿರುವ ನಟ ದರ್ಶನ್ ಸೆಷನ್ಸ್ ಕೋರ್ಟ್ ಗೆ ಹಾಜರಾದ ನಂತರ ಸಂಜೆ ಆಸ್ಪತ್ರೆಗೆ ಮರಳಲಿದ್ದಾರೆ.
ಬೆನ್ನುನೋವಿನ ಕಾರಣ ಮಧ್ಯಂತರ ಜಾಮೀನು ಪಡೆದಿದ್ದ ದರ್ಶನ್ ಒಂದೂವರೆ ತಿಂಗಳಿನಿಂದ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಬೆನ್ನು ನೋವಿಗೆ ಶಸ್ತ್ರಚಿಕಿತ್ಸೆ ಅಗತ್ಯವೆಂದು ಹೇಳಲಾಗಿತ್ತು. ಆದರೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎಲ್ಲಾ ಆರೋಪಿಗಳಿಗೂ ಜಾಮೀನು ಮಂಜೂರು ಮಾಡಿತ್ತು.
ಜಾಮೀನು ಮಂಜೂರಾದ ಬೆನ್ನಲ್ಲೇ ದರ್ಶನ್ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳದೇ ಸೋಮವಾರ ಬಿಜಿಎಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು ತಮ್ಮ ಮನೆಗೆ ಮರಳಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ದರ್ಶನ್ ಅವರನ್ನು ನಂತರ ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಆದರೆ ಬೆನ್ನುನೋವಿನ ಕಾರಣ ನ್ಯಾಯಾಲಯ ಮಧ್ಯಂತರ ಜಾಮೀನು ನೀಡಿದ್ದರಿಂದ ಬೆಂಗಳೂರಿನಲ್ಲಿ ಕೆಂಗೇರಿ ಬಳಿ ಇರುವ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದರು.