ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದ ನಟ ದರ್ಶನ್ 48 ದಿನ ಆಸ್ಪತ್ರೆಯಲ್ಲಿದ್ದರೂ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳದೇ ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ್ದಾರೆ.
ಬೆಂಗಳೂರಿನ ಕೆಂಗೇರಿ ಬಳಿ ಇರುವ ಬಿಜಿಎಸ್ ಆಸ್ಪತ್ರೆಯಿಂದ ಬುಧವಾರ ಬೆಳಿಗ್ಗೆ ಬಿಡುಗಡೆ ಆದ ದರ್ಶನ್, ತಮ್ಮ ರಾಜರಾಜೇಶ್ವರಿ ನಿವಾಸಕ್ಕೆ ತೆರಳದೇ ಪತ್ನಿ ವಿಜಯಲಕ್ಷ್ಮೀ ಅವರ ಹೊಸಕೆರೆಹಳ್ಳಿ ಮನೆಗೆ ತೆರಳಿದ್ದಾರೆ.
48 ದಿನಗಳ ಬಳಿಕ ಆಸ್ಪತ್ರೆಯಿಂದ ದರ್ಶನ್ ಬಿಡುಗಡೆ ಆಗಿದ್ದಾರೆ. ಆದರೆ ಬೆನ್ನುನೋವಿಗೆ ಶಸ್ತ್ರಚಿಕಿತ್ಸೆ ಅಗತ್ಯವೆಂದು ವಾದ ಮಾಡಿ ಮಧ್ಯಂತರ ಜಾಮೀನು ಪಡೆದಿದ್ದ ದರ್ಶನ್, ಸಾಮಾನ್ಯ ಜಾಮೀನು ಸಿಗುತ್ತಿದ್ದಂತೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿಲ್ಲ ಎಂದು ಹೇಳಲಾಗಿದೆ.
ಪತ್ನಿ ವಿಜಯಲಕ್ಷ್ಮಿ ಅವರ ಹೊಸಕೆರೆಹಳ್ಳಿಯ ಫ್ಲ್ಯಾಟ್‌ಗೆ ದರ್ಶನ್ ಪತ್ನಿ, ಮಗ ಮತ್ತು ನಟ ಧನ್ವೀರ್ ಜೊತೆ ಆಗಮಿಸಿದ್ದು, ಎರಡು ದಿನಗಳ ಕಾಲ ತಂಗಲಿದ್ದಾರೆ ಎಂದು ಹೇಳಲಾಗಿದೆ.
ದರ್ಶನ್ ಬರುತ್ತಿದ್ದಂತೆ ಸೆಕ್ಯೂರಿಟಿ ಸಿಬ್ಬಂದಿ ಗೇಟ್ ಅನ್ನು ಕ್ಲೋಸ್ ಮಾಡಿದ್ದಾರೆ. ದರ್ಶನ್ ನೋಡಲು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದಾರೆ. ಡಿಸ್ಚಾರ್ಜ್ ಆಗಿ ಮನೆಗೆ ಬಂದಿರುವ ನೆಚ್ಚಿನ ನಟನ ನೋಡಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದು ಸಿಹಿ ಹಂಚಿ ಸಂಭ್ರಮಿಸಿದ್ದಾರೆ.