ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ನಟಿಸಿರುವ ಪುಷ್ಪ-2 ಚಿತ್ರ ಮೊದಲ ದಿನದ ಗಳಿಕೆಯಲ್ಲಿ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತೀ ದೊಡ್ಡ ಓಪನಿಂಗ್ ಪಡೆದ ಚಿತ್ರ ಎಂಬ ಗೌರವಕ್ಕೆ ಪಾತ್ರವಾಗಿದೆ.
ಎಸ್.ಎಸ್. ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಮೊದಲ ದಿನ 133 ಕೋಟಿ ರೂ. ಗಳಿಕೆಯ ದಾಖಲೆಯನ್ನು ಪುಷ್ಪ-2 175.2 ಕೋಟಿ ಸಂಗ್ರಹಿಸುವ ಮೂಲಕ ಮುರಿದಿದೆ.
ಸುಕುಮಾರ್ ನಿರ್ದೇಶಿಸಿ ಮೈತ್ರಿ ಪ್ರೊಡಾಕ್ಷನ್ ನಿರ್ಮಿಸಿರುವ ಪುಷ್ಪ-2 ತೆಲುಗು ಭಾಷೆಯಲ್ಲಿ ಅತ್ಯಧಿಕ 95.1 ಕೋಟಿ ರೂ. ಗಳಿಸಿ ಹೊಸ ದಾಖಲೆ ಬರೆದಿದೆ. ಹಿಂದಿಯಲ್ಲಿ ಕೂಡ ಅಬ್ಬರಿಸಿರುವ ಪುಷ್ಪ-2 ಚಿತ್ರ 62 ಕೋಟಿ ರೂ. ತಮಿಳಿನಲ್ಲಿ 7 ಕೋಟಿ ರೂ. ಹಾಗೂ ಕರ್ನಾಟಕದಲ್ಲಿ ಕೇವಲ 1 ಮತ್ತು ಕೇರಳದಲ್ಲಿ 5 ಕೋಟಿ ರೂ. ಗಳಿಸಿದೆ.
ವಿದೇಶದಲ್ಲಿ ಗಳಿಸಿದ ಆದಾಯದ ವಿವರ ಸ್ಪಷ್ಟವಾಗಿಲ್ಲ. ಇದರಿಂದ ವಿದೇಶೀ ಕಲೆಕ್ಷನ್ ಸೇರಿದಂತೆ 250 ಕೋಟಿ ರೂ. ದಾಟುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ.
ಚಿತ್ರ ಬಿಡುಗಡೆ ಆದ ಮೊದಲ ದಿನ ಶೇ.೯೦ರಷ್ಟು ಚಿತ್ರಮಂದಿರಗಳು ಭರ್ತಿಯಾಗಿವೆ. ಬೇರೆ ಭಾಷೆಗಳಿಗೆ ಹೋಲಿಸಿದರೆ ಕನ್ನಡದಲ್ಲಿ ಕೇವಲ 1 ಕೋಟಿ ರೂ. ಗಳಿಸುವ ಮೂಲಕ ನೀರಸ ಪ್ರದರ್ಶನ ನೀಡಿದೆ. ಚಿತ್ರದ ಅಬ್ಬರ ಗಮನಿಸಿದರೆ ವೀಕೆಂಡ್ ನಲ್ಲಿ 300ರಿಂದ 350 ಕೋಟಿ ರೂ.ಸಂಗ್ರಹಿಸುವ ಸಾಧ್ಯತೆ ಇದೆ.
ಮೇಕಿಂಗ್ ನಿಂದ ಗಮನ ಸೆಳೆದಿದ್ದ ಪುಷ್ಪ ಚಿತ್ರಗೆ ಹೋಲಿಸಿದರೆ ಪುಷ್ಪ-2 ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಚಿತ್ರದ ಮೊದಲಾರ್ಧ ಬೋರಿಂಗ್ ಆಗಿದ್ದರೆ, ವಿರಾಮ ಹಾಗೂ ಕ್ಲೈಮ್ಯಾಕ್ಸ್ ಅದ್ಭುತವಾಗಿ ಮೂಡಿಬಂದಿದೆ.
ಪುಷ್ಪದಿಂದ ಮೂಡಿದ್ದ ನಿರೀಕ್ಷೆ ಭ್ರಮನಿರಸನ ಉಂಟು ಮಾಡಿದೆ. ಅಲ್ಲದೇ ಚಿತ್ರದಲ್ಲಿ ಅಲ್ಲು ಅರ್ಜುನ್ ನಟನೆ ಹೊರತುಪಡಿಸಿದರೆ ಅಂತಹ ವಿಶೇಷ ಏನಿಲ್ಲ. ಫಹಾದ್ ಫಾಸಿಲ್ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ರಶ್ಮಿಕಾ ಮಂದಣ್ಣ ಡ್ಯಾನ್ಸ್ ಗೆ ಸೀಮಿತವಾಗಿದ್ದಾರೆ. ಆದರೆ ಚಿತ್ರದ ಕೊನೆಯಲ್ಲಿ ಪುಷ್ಪ-೩ ಬರುತ್ತದೆ ಎಂದು ತೋರಿಸಿದ್ದರಿಂದ ಅಭಿಮಾನಿಗಳ ಕುತೂಹಲ ಹೆಚ್ಚಿದೆ.
ಪುಷ್ಪ-3 ಚಿತ್ರದಲ್ಲಿ ದೇವರಕೊಂಡ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಪುಷ್ಪ2 ಬಿಡುಗಡೆಗೆ 3 ವರ್ಷದ ತೆಗೆದುಕೊಂಡಿದ್ದ ತಂಡ 3ನೇ ಭಾಗ ಯಾವಾಗ ಬರುತ್ತದೆ ಎಂದು ಊಹಿಸುವುದು ಕಷ್ಟವಾಗಿದೆ.
ಇದೇ ವೇಳೆ ಪುಷ್ಪ-2 ಚಿತ್ರದ ಪ್ರದರ್ಶನದ ವೇಳೆ ನಡೆದ ಕಾಲ್ತುಳಿತದಲ್ಲಿ ಮಹಿಳೆ ಮೃತಪಟ್ಟ ಘಟನೆಗೆ ಸಂಬಂಧಿಸಿ ಹೈದರಾಬಾದ್ ಪೊಲೀಸರು ನಟ ಅಲ್ಲು ಅರ್ಜುನ್ ವಿರುದ್ಧ ಕೇಸು ದಾಖಲಿಸಿದ್ದಾರೆ.
ಪುಷ್ಪ-೨ ಚಿತ್ರದ ಪ್ರೀಮಿಯರ್ ಶೋ ವೇಳೆ ಯಾವುದೇ ಮಾಹಿತಿ ನೀಡದೇ ಸಂಧ್ಯಾ ಥಿಯೇಟರ್ ಗೆ ಅಲ್ಲು ಅರ್ಜುನ್ ಭೇಟಿ ನೀಡಿದ್ದರಿಂದ ಕಾಲ್ತುಳಿತ ಉಂಟಾಗಿದ್ದು, ಇದರಿಂದ ಮಹಿಳೆ ಮೃತಪಟ್ಟು ಆಕೆಯ ಮಗ ಗಂಭೀರವಾಗಿ ಗಾಯಗೊಂಡಿದ್ದ.ಅಲ್ಲು ಅರ್ಜುನ್ ಅಲ್ಲದೇ ಸಂಧ್ಯಾ ಥಿಯೇಟರ್ ಮಾಲೀಕರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಿನಿಮಾ ಬಿಡುಗಡೆ ವೇಳೆ ಸೂಕ್ತ ಭದ್ರತಾ ವ್ಯವಸ್ಥೆ ಮಾಡದೇ ಇರುವುದು ಹಾಗೂ ಪೊಲೀಸರ ಗಮನಕ್ಕೆ ವಿಷಯ ತಾರದೇ ಇರುವ ಬಗ್ಗೆ ಸಂಧ್ಯಾ ಥಿಯೇಟರ್ ಮಾಲೀಕರ ವಿರುದ್ಧವೂ ಕೇಸು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.