Tuesday, October 6, 2026
Google search engine
Homeರಾಜ್ಯBREAKING NEWS ಕೆಪಿಎಸ್ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ, ಸದಸ್ಯೆ ಗೀತಾ ಇಡಿ ವಶಕ್ಕೆ

BREAKING NEWS ಕೆಪಿಎಸ್ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ, ಸದಸ್ಯೆ ಗೀತಾ ಇಡಿ ವಶಕ್ಕೆ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದಲ್ಲಿ (ಕೆಪಿಎಸ್ ಸಿ) ಸರ್ಕಾರಿ ಹುದ್ದೆಗಳ ನೇಮಕಾತಿ ಭ್ರಷ್ಟಾಚಾರ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ (ಇಡಿ) ಮಾಜಿ ಅಧ್ಯಕ್ಷ ಶಿವಶಂಕರಪ್ಪ ಹಾಗೂ ಸದಸ್ಯೆ ಬಿವಿ ಗೀತಾ ಅವರನ್ನು ವಶಕ್ಕೆ ಪಡೆದಿದೆ.

ನಗರದ ಡಾಲರ್ಸ್ ಕಾಲೋನಿಯಲ್ಲಿರುವ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ನಲ್ಲಿ ಶಿವಶಂಕರಪ್ಪ ಸಾಹುಕಾರ್ ಇದ್ದ ವೇಳೆ ಮಂಗಳವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಇಡಿ ಅಧಿಕಾರಿಗಳು ದಾಳಿ ನಡೆಸಿದ ನಂತರ ಅವರನ್ನು ವಶಕ್ಕೆ ಪಡೆದಿದೆ.

ಎರಡು ಕಾರುಗಳಲ್ಲಿ ಆಗಮಿಸಿದ ನಾಲ್ವರು ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಬಳಿಕ ಶಿವಶಂಕರಪ್ಪ ಅವರನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ನಂತರ ಕೆಪಿಎಸ್ ಸಿ ಸದಸ್ಯೆ ಗೀತಾ ಅವರನ್ನು ಕೂಡ ವಶಕ್ಕೆ ಪಡೆಯಲಾಗಿದೆ.

ಈ ಹಿಂದೆ ಕೂಡ ಇಡಿ ಅಧಿಕಾರಿಗಳು ಶಿವಶಂಕರಪ್ಪ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದರು. ಇದೀಗ ಎರಡನೇ ಬಾರಿಗೆ ದಾಳಿ ನಡೆಸಿ ಅವರನ್ನು ವಶಕ್ಕೆ ಪಡೆದಿದ್ದಾರೆ. ಇದೇ ವೇಳೆ ಕೆಪಿಎಸ್‌ಸಿ ಸದಸ್ಯೆ ಬಿ.ವಿ. ಗೀತಾ ಅವರ ಬೆಂಗಳೂರಿನ ನಿವಾಸದ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು, ಅವರನ್ನು ಕೂಡ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.

ತನಿಖೆ ವೇಳೆ ಈಗಾಗಲೇ ಬಂಧನಕ್ಕೆ ಒಳಗಾಗಿರುವ ಗ್ಯಾನೇಂದ್ರ ಭ್ರಷ್ಟಾಚಾರದ ಹಿಂದೆ ನಾಲ್ವರು ಅಧಿಕಾರಿಗಳು ಇದ್ದಾರೆ ಎಂದು ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದರು. ಈ ಮಾಹಿತಿ ಆಧರಿಸಿ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗಿದೆ.

ಮೆರಿಟ್ ಆಧರಿಸಿ ಲಂಚ:

ಇಡಿ ವಿಚಾರಣೆ ವೇಳೆ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರು ಕೆಪಿಎಸ್‌ಸಿ ನೇಮಕಾತಿ ಅಕ್ರಮದ ಕುರಿತು ಹಲವು ಮಹತ್ವದ ವಿಚಾರಗಳನ್ನು ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ.

ಅಭ್ಯರ್ಥಿಗಳು ಪಡೆದಿರುವ ಅಂಕ ಹಾಗೂ ಅವರ ಮೆರಿಟ್ ಆಧಾರದ ಮೇಲೆ ಲಂಚದ ಮೊತ್ತವನ್ನು ನಿಗದಿಪಡಿಸಲಾಗುತ್ತಿತ್ತು ಎಂದು ಅವರು ತನಿಖಾಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

ಮೆರಿಟ್ ಪಟ್ಟಿಯಲ್ಲಿದ್ದ ಅಭ್ಯರ್ಥಿಗಳ ಮಾಹಿತಿಯನ್ನು ಕೆಪಿಎಸ್‌ಸಿ ಸದಸ್ಯರು ಹಾಗೂ ಸಿಬ್ಬಂದಿ ಸಂಗ್ರಹಿಸುತ್ತಿದ್ದರು. ಬಳಿಕ ಮಧ್ಯವರ್ತಿಗಳ ಮೂಲಕ ಅಂತಹ ಅಭ್ಯರ್ಥಿಗಳನ್ನು ಸಂಪರ್ಕಿಸಿ, ಸರ್ಕಾರಿ ಉದ್ಯೋಗ ಕೊಡಿಸುವ ಭರವಸೆ ನೀಡಲಾಗುತ್ತಿತ್ತು.

10 ಲಕ್ಷದವರೆಗೆ ಹಣ:

ಡೀಲ್‌ನ ಭಾಗವಾಗಿ ಅಭ್ಯರ್ಥಿಗಳಿಂದ ಮುಂಗಡವಾಗಿ ₹5 ಲಕ್ಷದಿಂದ ₹10 ಲಕ್ಷದವರೆಗೆ ಹಣ ಪಡೆಯಲಾಗುತ್ತಿತ್ತು ಎಂದು ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಕಳೆದ ಎರಡು-ಮೂರು ವರ್ಷಗಳ ಅವಧಿಯಲ್ಲಿ ಒಟ್ಟು 13 ಇಲಾಖೆಗಳ ನೇಮಕಾತಿ ಪ್ರಕ್ರಿಯೆಗಳಲ್ಲಿ ಅಕ್ರಮ ನಡೆದಿದೆ ಎಂಬ ಮಾಹಿತಿಯನ್ನು ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಇಡಿ ಅಧಿಕಾರಿಗಳ ಮುಂದೆ ಬಹಿರಂಗಪಡಿಸಿದ್ದಾರೆ ಎನ್ನಲಾಗಿದೆ.

ಪಶುವೈದ್ಯಾಧಿಕಾರಿಗಳ ನೇಮಕಾತಿ, ಕೆಎಎಸ್‌ ಅಧಿಕಾರಿಗಳ ನೇಮಕಾತಿ, ಸಾರಿಗೆ ಇಲಾಖೆಯ ಮೋಟಾರು ವಾಹನ ನಿರೀಕ್ಷಕರ ನೇಮಕಾತಿ, ಆರೋಗ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಹಾಯಕ ಎಂಜಿನಿಯರ್‌ಗಳ ನೇಮಕಾತಿ ಸೇರಿದಂತೆ ಮೀನುಗಾರಿಕೆ ಹಾಗೂ ಪಶುಸಂಗೋಪನಾ ಇಲಾಖೆಯ ಹುದ್ದೆಗಳ ನೇಮಕಾತಿಯಲ್ಲೂ ಅಕ್ರಮ ನಡೆದಿರುವ ಬಗ್ಗೆ ತನಿಖಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ರಾಜಕಾರಣಿಗಳಿಗೆ ಹೆಚ್ಚಿದ ಆತಂಕ:

ಕೆಪಿಎಸ್‌ಸಿ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಇಡಿ ತನಿಖೆ ಇದೀಗ ಮತ್ತಷ್ಟು ತೀವ್ರಗೊಂಡಿದೆ. ಮಾಜಿ ಅಧ್ಯಕ್ಷ ಹಾಗೂ ಸದಸ್ಯೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.

ನೇಮಕಾತಿ ಅಕ್ರಮದಲ್ಲಿ ಪ್ರಭಾವಿಗಳ ಪಾತ್ರವಿದೆಯೇ ಎಂಬ ಬಗ್ಗೆಯೂ ತನಿಖೆ ಮುಂದುವರಿದಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಮಹತ್ವದ ವಿಚಾರಗಳು ಬಹಿರಂಗವಾಗುವ ಸಾಧ್ಯತೆಯಿದೆ. ಪ್ರಕರಣದ ಸಂಪೂರ್ಣ ಸತ್ಯಾಂಶ ತನಿಖೆಯಿಂದಲೇ ಹೊರಬರಬೇಕಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments