ಬಾಗಲಕೋಟೆ: ಒಬ್ಬರು ಗರ್ಭಿಣಿಯಾಗಿ, ಮತ್ತೊಬ್ಬರು ನಾದಿನಿಯಾಗಿ, ಇನ್ನೊಬ್ಬರು ತಾಯಿಯಾಗಿ ವೇಷಧರಿಸಿ ಮಹಾರಾಷ್ಟದ ಗಡಿ ಭಾಗದಲ್ಲಿ ಅಕ್ರಮ ಭ್ರೂಣಲಿಂಗ ಪತ್ತೆ ಹಾಗೂ ಗರ್ಭಪಾತ ಜಾಲವನ್ನು ಪತ್ತೆಹಚ್ಚಿದ ರೋಚಕ ಘಟನೆ ನಡೆದಿದೆ.
ಬಾಗಲಕೋಟೆ ಜಿಲ್ಲೆ ಹಾಗೂ ಮಹಾರಾಷ್ಟದ ಗಡಿ ಭಾಗದಲ್ಲಿ ಅಕ್ರಮ ಭ್ರೂಣಲಿಂಗ ಪತ್ತೆ ಹಾಗೂ ಗರ್ಭಪಾತ ಜಾಲವನ್ನು ಪತ್ತೆ ಹಚ್ಚಿರುವ ಮೂವರು ಮಹಿಳಾ ಅಧಿಕಾರಿಗಳ ನೇತೃತ್ವದ ತಂಡ ಮಹಾರಾಷ್ಟ್ರದ ಕರ್ಜಗಿಯಲ್ಲಿ ಸಾಕ್ಷಿ ಸಮೇತ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.
ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಕರ್, ಆರೋಗ್ಯ ಇಲಾಖೆಯ ಉಪನಿರ್ದೇಶಕಿ ( ಮೆಡಿಕಲ್ ಆ್ಯಕ್ಟ್) ಶೋಭಾ, ಬಾಗಲಕೋಟೆ ಡಿಎಚ್‌ಒ ಸುವರ್ಣಾ, ರಬಕವಿ-ಬನಹಟ್ಟಿ ತಹಸೀಲ್ದಾರ್ ಗಿರೀಶ ಸ್ವಾಧಿ, ಆರೋಗ್ಯ ಇಲಾಖೆಯ ಮನು ತಂಡ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಮಹಾರಾಷ್ಟ್ರದ ಪೊಲೀಸ್ ವಶಕ್ಕೆ ನೀಡಿದೆ.
ಮಹಾಲಿಂಗಪುರದಲ್ಲಿ ಮಧ್ಯವರ್ತಿ ಕವಿತಾ ಬಾಡನ್ನವರ ಅವರನ್ನು ಸೋಮವಾರ ಮಧ್ಯಾಹ್ನ ವಿಚಾರಣೆ ನಡೆಸಿ ಕಾರ್ಯಾಚರಣೆಗೆ ಇಳಿದ ಮಹಿಳಾ ಅಧಿಕಾರಿಗಳ ತಂಡದ ಉಪವಿಭಾಗಾಧಿಕಾರಿ ಶ್ವೇತಾ ಗರ್ಭೀಣಿಯಂತೆ ವೇಷ ಧರಿಸಿದರೆ ಶೋಭಾ ಅವರು ನಾದಿನಿ ಆಗಿ ಸುವರ್ಣಾ ತಾಯಿ ಆಗಿ ಮಧ್ಯವರ್ತಿಗಳೊಂದಿಗೆ ಸಂಜೆ 5ಕ್ಕೆ ಮಹಾರಾಷ್ಟ್ರದ ಜಾಡರ ಬಬಲಾದಿಗೆ ತೆರಳಿದ್ದಾರೆ.
ರಾತ್ರಿ 9.30ಕ್ಕೆ ಜಾಡರ ಬಬಲಾದಿ ತಲುಪಿ ಅಲ್ಲಿ 23 ವರ್ಷದ ನಿಖಿಲ ತೇಲಿಯನ್ನು ಸಂಪರ್ಕಿಸಿದಾಗ ಇಲ್ಲಿ ಸ್ಕ್ಯಾನಿಂಗ್ ಮಾಡುವುದಿಲ್ಲ. ತೋಟದ ಮನೆಯಲ್ಲಿ ಮಾಡುವುದಾಗಿ ತಿಳಿಸಿದ್ದಾನೆ. ಆಗ ನಿಖಿಲ ತಾಯಿ ದಾನಮ್ಮ ತೇಲಿ ಹಣಕ್ಕೆ ಬೇಡಿಕೆ ಇಟ್ಟು ಕರ್ಜಗಿ ಗ್ರಾಮದ ಕವಿತಾ ಗೋಡೆಕರ್ ಹಾಗೂ ಬಸವರಾಜ ಗೋಡೆಕರ್ ಎಂಬುವರ ಮನೆಗೆ ರಾತ್ರಿ 11 ಗಂಟೆ ಸುಮಾರಿಗೆ ಕರೆದುಕೊಂಡು ಹೋಗಿದ್ದಾಳೆ. ಆಗ ಕವಿತಾ ದಂಪತಿಗಳು ಪೋರ್ಟೆಬಲ್ ಸ್ಕ್ಯಾನಿಂಗ್ ಮಷಿನ್ ಹೊರ ತೆಗೆದು ಸ್ಕ್ಯಾನಿಂಗ್ ಮಾಡಲು ಮುಂದಾದಾಗ ಮಹಿಳಾ ಅಧಿಕಾರಿಗಳು ಅವುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕಿಂಗ್ ಪಿನ್ ಪರಾರಿ
ರಾತ್ರಿ 12 ಗಂಟೆಗೆ ಜಾಡರ ಬಬಲಾದಿ ಗ್ರಾಮಕ್ಕೆ ಮರಳಿದ ತಂಡ ಸಂಜಯ ವಾಗ್ಮೋರೆ ಊರ್ಫ್ ಪಾಟೀಲ ಎಂಬ ನಕಲಿ ವೈದ್ಯನನ್ನು ಬಂಧಿಸಲು ಮುಂದಾಗಿದೆ. ಆತ ಈ ದಂಧೆಯ ಪ್ರಮುಖ ಕಿಂಗ್‌ಫಿನ್ ಆಗಿದ್ದು, ಸುಳಿವು ದೊರೆತು ಅಲ್ಲಿಂದ ಪರಾರಿಯಾಗಿದ್ದಾನೆ. ರಾತ್ರಿ 2ಗಂಟೆಗೆ ಜತ್ತ ತಾಲೂಕು ಆರೋಗ್ಯ ಅಧಿಕಾರಿಗಳು ಹಾಗೂ ವೈದ್ಯಾಧಿಕಾರಿಗಳನ್ನು ಸಂಪರ್ಕಿಸಿ ಉಮದಿ ಠಾಣೆಗೆ ತೆರಳಿ ಐವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಪ್ರಕ್ರಿಯೆ ಆರಂಭಿಸಿ ನಮ್ಮ ತಂಡ ಮರಳಿ ಬಂದಿದೆ ಎಂದು ಜಿಲ್ಲಾಧಿಕಾರಿ ಸಂಗಪ್ಪ ತಿಳಿಸಿದರು.
ಈ ಹಿಂದೆ 2024ರಲ್ಲಿ ಮಹಾಲಿಂಗಪುರದಲ್ಲಿ ಈ ಗ್ಯಾಂಗ್ ಇದೇ ದಂಧೆ ನಡೆಸಿ ಬಂಧನಕ್ಕೆ ಒಳಗಾಗಿತ್ತು. ಈಗ ಬೇಲ್ ಮೇಲೆ ಹೊರಗೆ ಬಂದು ಮತ್ತೆ ದಂಧೆ ಮುಂದುವರಿಸಿದ್ದು, ನಮ್ಮ ಮಹಿಳಾ ಅಧಿಕಾರಿಗಳ ತಂಡ ಆ ಆರೋಪಿಗಳನ್ನು ಪತ್ತೆ ಹಚ್ಚಿ ಸ್ಕ್ಯಾನಿಂಗ್ ಮಶೀನ್ ಸಮೇತ ಉಮದಿ ಪೊಲೀಸ್‌ರಿಗ ಒಪ್ಪಿಸಿದ್ದಾರೆ. ಈ ಮಹಿಳಾ ಅಧಿಕಾರಿಗಳ ಕಾರ್ಯಕ್ಕೆ ಇಡೀ ಜಿಲ್ಲಾಡಳಿತ ಮೆಚ್ಚುಗೆ ವ್ಯಕ್ತಪಡಿಸಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ, ಆರೋಗ್ಯ ಇಲಾಖೆಯ ಉಪನಿರ್ದೇಶಕಿ ಶೋಭಾ, ಡಿಎಚ್‌ಓ ಸುವರ್ಣಾ ಇದ್ದರು.



