Wednesday, June 10, 2026
Google search engine
Homeಅಪರಾಧಬಾಗಪ್ಪ ಹರಿಜನ ಕೊಲೆಗೈದ ನಾಲ್ವರು ಅರೆಸ್ಟ್: ವಕೀಲನ ಕೊಲೆಗೆ ಸೇಡು ತೀರಿಸಿಕೊಂಡ ಪಿಂಟ್ಯಾ ಗ್ಯಾಂಗ್!

ಬಾಗಪ್ಪ ಹರಿಜನ ಕೊಲೆಗೈದ ನಾಲ್ವರು ಅರೆಸ್ಟ್: ವಕೀಲನ ಕೊಲೆಗೆ ಸೇಡು ತೀರಿಸಿಕೊಂಡ ಪಿಂಟ್ಯಾ ಗ್ಯಾಂಗ್!

ಭೀಮಾ ತೀರದ ಹಂತಕ ಬಾಗಪ್ಪ ಹರಿಜನ ಕೊಲೆ ಪ್ರಕರಣವನ್ನು 24 ಗಂಟೆಗಳಲ್ಲಿ ಭೇದಿಸಿರುವ ವಿಜಯನಗರ ಪೊಲೀಸರು ಪಿಂಟ್ಯಾ ಹಾಗೂ ಅವರ ಮೂವರು ಸಹಚರನ್ನು ಬಂಧಿಸಿದ್ದಾರೆ.

ಇಂಡಿ ತಾಲೂಕಿನ ಅಗರಖೇಡ ಗ್ರಾಮದ ಪ್ರಕಾಶ ಅಲಿಯಾಸ್ ಪಿಂಟ್ಯಾ ಅಗರಕೇಡ್, ಇಂಡಿ ತಾಲೂಕಿನ ಹೊರ್ತಿ ಗ್ರಾಮದ ರಾಹುಲ ಭೀಮಾಶಂಕರ ತಳಕೇರಿ, ಅಗರಖೇಡ ಗ್ರಾಮದ ಸುದೀಪ ರೇಣುಕಾ ಕಾಂಬಳೆ, ಬೈಲಹೊಂಗಲ ಪಟ್ಟಣದ ಬಸವೇಶ್ವರ ಆಶ್ರಯ ಕಾಲನಿಯ ಮಣಿಕಂಠ ಎಂಬವರನ್ನು ಬಂಧಿಸಲಾಗಿದೆ. ಆರೋಪಿಗಳು ಕೊಲೆಗೆ ಬಳಸಿದ ಆಯುಧ ಮತ್ತು ವಾಹನಗಳನ್ನು ಜಪ್ತಿ ಮಾಡಲಾಗಿದೆ.

ಕೊಲೆ ಬಳಿಕ ಬಾಗಪ್ಪ ಹರಿಜನ ಪುತ್ರಿ ಇಂಡಿ ತಾಲೂಕಿನ ಬಬಲಾದಿ ಗ್ರಾಮದ ಗಂಗೂಬಾಯಿ ಬಾಗಪ್ಪ ಹರಿಜನ ನೀಡಿದ್ದ ದೂರು ಹಿನ್ನೆಲೆಯಲ್ಲಿ ವಿಜಯಪುರ ನಗರ ಡಿವೈಎಸ್ಪಿ ಬಸವರಾಜ ಯಲಿಗಾರ ನೇತೃತ್ವದಲ್ಲಿ ಗಾಂಧಿಚೌಕ ಸಿಪಿಐ ಪ್ರದೀಪ ತಳಕೇರಿ, ಗೋಳಗುಮ್ಮಟ ಸಿಪಿಐ ಮಲ್ಲಯ್ಯ ಮಠಪತಿ ಮತ್ತು ಸಿಬ್ಬಂದಿಯನ್ನೊಳಗೊಂಡ ತಂಡ ರಚಿಸಲಾಗಿತ್ತು

ಪೊಲೀಸರ ವಿಶೇಷ ತಂಡ ಕಾರ್ಯಾಚರಣೆ ನಡೆಸಿ 24 ಗಂಟೆಯಲ್ಲಿ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದೆ. ವಿಚಾರಣೆ ವೇಳೆ ಕೆಲವು ತಿಂಗಳ ಹಿಂದೆ ವಕೀಲ ರವಿ ಮೇಲಿನಕೇರಿ ಹತ್ಯೆಗೆ ಪ್ರತೀಕಾರವಾಗಿ ಈ ಕೃತ್ಯ ಎಸಗಲಾಗಿದೆ ಎಂದು ತಿಳಿದು ಬಂದಿದೆ.

ಬಾಗಪ್ಪ ಹರಿಜನ ಮತ್ತು ರವಿ ಮೇಲಿನಕೇರಿ ಸಂಬಂಧಿಕರಾಗಿದ್ದು, ಇವರಿಬ್ಬರ ನಡುವೆ ಕೆಲವು ವರ್ಷಗಳಿಂದ ಹಣಕಾಸು ವ್ಯವಹಾರವಿತ್ತು. 2024 ಆಗಸ್ಟ್ 12ರಂದು ವಿಜಯಪುರ ನಗರದಲ್ಲಿ ರವಿ ಮೇಲಿನಕೇರಿಯನ್ನು ಹತ್ಯೆ ಮಾಡಲಾಗಿತ್ತು.

ಪ್ರಕರಣದಲ್ಲಿ ತುಳಸಿರಾಮ ಹರಿಜನ ಮತ್ತು ಆತನ ಸಹಚರರಾದ ಅಲೇಕ್ಸ್ ಗೊಲ್ಲರ, ಶಣ್ಮುಖ ನಡುವಿನಕೇರಿ, ಪ್ರಕಾಶ ಗೊಲ್ಲರ, ಮುರುಗೇಶ ಉಳ್ಳಾಗಡ್ಡಿ, ರಾಜೇಸಾಬ ರುದ್ರವಾಡಿ ಅವರನ್ನು ಬಂಧಿಸಿದ್ದ ಪೊಲೀಸರು ನ್ಯಾಯಾಂಗ ವಶಕ್ಕೆ ನೀಡಿದ್ದರು.

ನಿಮ್ಮ ಅಣ್ಣ ನನ್ನ ಹೆಸರು ಹೇಳಿ ಹಣ, ಆಸ್ತಿ ಮತ್ತು ವಾಹನ ಎಲ್ಲವನ್ನೂ ಮಾಡಿಕೊಂಡಿದ್ದಾನೆ. ಅವೆಲ್ಲವನ್ನು ನನಗೆ ಬಿಟ್ಟು ಕೊಡಬೇಕು. ಇಲ್ಲದಿದ್ದರೆ ನಿನ್ನ ಅಣ್ಣನಂತೆ ನಿನ್ನ ಕೊಲೆಯಾಗುವುದು ಎಂದು ಪಿಂಟ್ಯಾಗೆ ಬಾಗಪ್ಪ ಹರಿಜನ ಹೆದರಿಸಿದ್ದ. ಇದರಿಂದ ಅಣ್ಣನ ಕೊಲೆ ಬಾಗಪ್ಪ ಹರಿಜನ ಮಾಡಿರುವುದು ಆರೋಪಿಗಳಿಗೆ ದೃಢಪಟ್ಟಿತ್ತು.

ಬಾಗಪ್ಪ ಹರಿಜನನನ್ನು ಕೊಲೆಗೆ ಸಂಚು ರೂಪಿಸಿದ ಪಿಂಟ್ಯಾ ಹಾಗೂ ಸಹಚರರು ಫೆ. 11 ರಂದು ರಾತ್ರಿ ವಿಜಯಪುರ ನಗರದ ಮದೀನಾ ನಗರದಲ್ಲಿ ಬಾಗಪ್ಪ ಹರಿಜನ ವಾಸಿಸುತ್ತಿದ್ದ ಬಾಡಿಗೆ ಮನೆಯ ಬಳಿ ವಾಕಿಂಗ್ ಮಾಡುತ್ತಿದ್ದಾಗ ಆಟೋ ಮತ್ತು ಬೈಕ್‌ನಲ್ಲಿ ಬಂದು ಗುಂಡು ಹಾರಿಸಿ ಹೊಡೆದು ಕೊಲೆ ಮಾಡಿದ್ದಾರೆ.

ಕೊಲೆಯಾದ ಭಾಗಪ್ಪ ಹುಚ್ಚಪ್ಪ ಹರಿಜನ ವಿರುದ್ಧ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಒಟ್ಟು ಆರು ಕೊಲೆ ಪ್ರಕರಣಗಳು ದಾಖಲಾಗಿವೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments