ಕೊಡಗು: ಅಮೆರಿಕ ಮೂಲದ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ ಹೋಂ ಸ್ಟೇ ಮಾಲೀಕ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಕೇರಳ ಗಡಿಭಾಗದ ಪೊನ್ನಂಪೇಟೆ ತಾಲೂಕಿನ ಕುಟ್ಟ ಗ್ರಾಮದ ಹೋಂಸ್ಟೇನಲ್ಲಿ ತಂಗಿದ್ದ ವಾಷಿಂಗ್ಟನ್ ಮೂಲದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಜಾರ್ಖಂಡ್ ಮೂಲದ ವೃಜೇಶ್ ಕುಮಾರ್, ಹೋಂಸ್ಟೇ ಮಾಲೀಕ ವಿಶಾಲ್ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಪ್ರವಾಸಕ್ಕೆ ಬಂದಿದ್ದ ವಿದೇಶಿ ಮಹಿಳೆ ಕುಟ್ಟ ಗ್ರಾಮದ ದೇವಿ ವಿಲ್ಲಾ ಹೋಂ ಸ್ಟೇನಲ್ಲಿ ತಂಗಿದ್ದರು. ಏಪ್ರಿಲ್ 19ರಂದು ವೃಜೇಶ್ ಕುಮಾರ್ ಸಿಹಿ ಪಾನಕಕ್ಕೆ ಮತ್ತು ಬರುವ ಔಷಧಿ ಬೆರಸಿ ಮಹಿಳೆಗೆ ನೀಡಿದ್ದು, ಆಕೆ ಪ್ರಜ್ಞೆ ತಪ್ಪಿದ ಬಳಿಕ ಅತ್ಯಾಚಾರ ಎಗಿದ್ದಾನೆ ಎಂದು ಸಂತ್ರಸ್ತೆ ನೀಡಿದ ದೂರಿನಲ್ಲಿ ಉಲ್ಲೇಖವಾಗಿದೆ.
ವಿಷಯ ತಿಳಿದ ಹೋಮ್ಸ್ಟೇ ಮಾಲೀಕ ವಿಶಾಲ್ ಪ್ರಕರಣವನ್ನೇ ಮುಚ್ಚಿಹಾಕಲು ಯತ್ನಿಸಿದ್ದು, ಮೂರು ದಿನಗಳ ಕಾಲ ಸಂತ್ರಸ್ತೆ ಯಾರನ್ನೂ ಸಂಪರ್ಕ ಮಾಡದಂತೆ ತಡೆದಿದ್ದಾನೆ. ಹೋಂ ಸ್ಟೇ ವೈಫೈ ಕೂಡ ಕಟ್ ಮಾಡಿದ್ದಾನೆ.
3 ದಿನದ ಬಳಿಕ ಮೈಸೂರಿಗೆ ಬಂದ ವಿದೇಶಿ ಮಹಿಳೆ ಅಮೆರಿಕದ ರಾಯಭಾರ ಕಚೇರಿಯನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ, ತಕ್ಷಣವೇ ಇ-ಮೇಲ್ ಮೂಲಕ ಮೈಸೂರಿನ ಅಧಿಕಾರಿಗಳನ್ನು ಸಂಪರ್ಕಿಸಿದ ಅಮೆರಿಕ ರಾಯಭಾರ ಕಚೇರಿ ಅಧಿಕಾರಿಗಳು ಪ್ರಕರಣ ದಾಖಲಿಸುವಂತೆ ಸೂಚಿಸಿದಾಗ ಮೈಸೂರಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಬೆಳಕಿಗೆ ಬಂದ ನಂತರ ನವದೆಹಲಿ ಹಾಗೂ ಚೆನ್ನೈ ಕಚೇರಿಗಳ ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಮಂಗಳವಾರ ಕೊಡಗಿಗೆ ಭೇಟಿ ನೀಡಿದ್ದಾರೆ. ಆದರೆ ಅಧಿಕಾರಿಗಳಿಗೆ ಸ್ಪಷ್ಟ ಮಾಹಿತಿ ನೀಡಲು ಕೊಡಗು ಎಸ್ಪಿ ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ.
ಪ್ರಕರಣ ಸಂಬಂಧ ಅತ್ಯಾಚಾರ ಆರೋಪಿ ಹಾಗೂ ಹೋಂ ಸ್ಟೇ ಮಾಲಿಕ ಇಬ್ಬರನ್ನೂ ಬಂಧಿಸಿ ಹಾಜರುಪಡಿಸಿದಾಗ ಕೋರ್ಟ್ ಮೇ 3ರ ವರೆಗೆ ನ್ಯಾಯಾಂಗ ಬಂಧನದಲ್ಲಿಡಲು ಆದೇಶ ನೀಡಿದೆ. ಘಟನೆ ಸಂಬಂಧ ತನಿಖೆ ನಡೆಯುತ್ತಿದೆ, ಈಗಲೇ ಹೆಚ್ಚಿನ ವಿವರ ನೀಡಲು ಸಾಧ್ಯವಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.



