Tuesday, June 30, 2026
Google search engine
Homeಕಾನೂನುತಪ್ಪು ಮಾಡಿಲ್ಲದಿದ್ದರೆ ಸಂತ್ರಸ್ತೆಗೆ 2 ಲಕ್ಷ ಕೊಟ್ಟಿದ್ದೇಕೆ: ಬಿಎಸ್ ಯಡಿಯೂರಪ್ಪಗೆ ಕೋರ್ಟ್ ಪ್ರಶ್ನೆ

ತಪ್ಪು ಮಾಡಿಲ್ಲದಿದ್ದರೆ ಸಂತ್ರಸ್ತೆಗೆ 2 ಲಕ್ಷ ಕೊಟ್ಟಿದ್ದೇಕೆ: ಬಿಎಸ್ ಯಡಿಯೂರಪ್ಪಗೆ ಕೋರ್ಟ್ ಪ್ರಶ್ನೆ

ಬೆಂಗಳೂರು: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯಿದೆಯಡಿ (ಪೋಕ್ಸೋ) ಕಾಗ್ನಿಜೆನ್ಸ್ ತೆಗೆದುಕೊಂಡಿರುವ ವಿಚಾರಣಾ ನ್ಯಾಯಾಲಯದ ಕ್ರಮವನ್ನು ಹೈಕೋರ್ಟ್‌ ಎತ್ತಿ ಹಿಡಿದಿದೆ.

ಈ ಆದೇಶದಿಂದಾಗಿ ಮಾಜಿ ಸಿಎಂ ಬಿಎಸ್​ವೈಗೆ ತೀವ್ರ ಹಿನ್ನಡೆಯಾದಂತಾಗಿದೆ. ಪ್ರಕರಣ ಸಂಬಂಧ ಬಿ.ಎಸ್.ಯಡಿಯೂರಪ್ಪ ಮತ್ತಿತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಐ.ಅರುಣ್ ಅವರಿದ್ದ ಏಕಸದಸ್ಯ ಪೀಠ, ವಿಚಾರಣಾ ನ್ಯಾಯಾಲಯದ ಕ್ರಮ ಎತ್ತಿಹಿಡಿದು ಆದೇಶಿಸಿದೆ.

ವಿಶೇಷ ನ್ಯಾಯಾಲಯವು ಅರ್ಜಿದಾರರು ವಿಚಾರಣೆಗೆ ಅಗತ್ಯವಿದಲ್ಲಿ ಮಾತ್ರ ಹಾಜರಾಗುವಂತೆ ತಿಳಿಸಬೇಕು. ಅಲ್ಲದೇ, ಖುದ್ದು ವಿಚಾರಣೆಗೆ ಹಾಜರಾಗಲು ಸೂಕ್ತ ಕಾರಣಗೊಳೊಂದಿಗೆ ಅರ್ಜಿ ಸಲ್ಲಿಸಿದಲ್ಲಿ ಪರಿಗಣಿಸಬೇಕು. ಈ ಆದೇಶದಲ್ಲಿ ಉಲ್ಲೇಖಿಸಿರುವ ಅಂಶಗಳ ಮೇಲೆ ಪ್ರಭಾವಕ್ಕೊಳಗಾಗದೇ, ಪ್ರಕರಣದ ಸಂಬಂಧ ಲಭ್ಯವಿರುವ ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ಆದೇಶವನ್ನು ಹೊರಡಿಸಬಹುದಾಗಿದೆ ಎಂದು ಪೀಠ ಹೇಳಿದೆ.

ಪ್ರಕರಣದಿಂದ ತನ್ನನ್ನು ಆರೋಪ ಮುಕ್ತರಾಗುವುದು ಸೇರಿದಂತೆ, ಯಾವುದೇ ಮನವಿಗಳಿದ್ದಲ್ಲಿ ವಿಚಾರಣಾ ನ್ಯಾಯಾಲಯದ ಮುಂದೆ ಸಲ್ಲಿಸಲು ಅರ್ಜಿದಾರರಿಗೆ ಸಂಪೂರ್ಣ ಸ್ವತಂತ್ರರಾಗಿರಲಿದ್ದಾರೆ ಎಂದು ಪೀಠ ಇದೇ ವೇಳೆ ತಿಳಿಸಿತು.

ಈ ವೇಳೆ, ಅರ್ಜಿದಾರರ ಪರ ವಕೀಲರು, ”ಪ್ರಕರಣದ ವಿಚಾರಣೆಗೆ ಕಾಲಮಿತಿ ನಿಗದಿಪಡಿಸಬೇಕು” ಎಂದು ಮನವಿ ಮಾಡಿದರು. ಇದಕ್ಕೆ ಪೀಠ, ”ಆ ರೀತಿಯ ಆದೇಶಗಳನ್ನು ಮಾಡಲಾಗದು” ಎಂದು ಹೇಳಿ ಅರ್ಜಿ ಇತ್ಯರ್ಥಪಡಿಸಿರುವುದಾಗಿ ಮೌಖಿಕವಾಗಿ ತಿಳಿಸಿತು.

ಪ್ರಕರಣ ಸಂಬಂಧ ಈ ಹಿಂದೆ ನಡೆದ ವಿಚಾರಣೆ ವೇಳೆ, ”ಅರ್ಜಿದಾರ ಯಡಿಯೂರಪ್ಪ ಪರ ವಕೀಲರು, ಅಪ್ರಾಪ್ತ ಸಂತ್ರಸ್ತೆಯ ಹೇಳಿಕೆ ಮಾತ್ರ ಪರಿಗಣಿಸಿ, ಕಾಗ್ನಿಜೆನ್ಸ್ ಪಡೆದುಕೊಳ್ಳಲಾಗಿದೆ ಎಂಬುದಾಗಿ ವಿಚಾರಣಾಧೀನ ನ್ಯಾಯಾಲಯ ಹೇಳಬೇಕಿತ್ತು. ಅದನ್ನೂ ಮಾಡಿಲ್ಲ. ಹೊಸದಾಗಿ ಪ್ರಕರಣ ಪರಿಗಣಿಸುವಂತೆ ಸಮನ್ವಯ ಪೀಠವು ವಿಚಾರಣಾಧೀನ ನ್ಯಾಯಾಲಯಕ್ಕೆ ಆದೇಶಿಸಿತ್ತು. ಇದನ್ನೂ ಮಾಡಲಾಗಿಲ್ಲ. ಕಾಗ್ನಿಜೆನ್ಸ್ ಪರಿಗಣಿಸುವಾಗ ವಿಚಾರಣಾಧೀನ ನ್ಯಾಯಾಲಯದ ನ್ಯಾಯಾಧೀಶರು ವಿವೇಚನೆ ಬಳಸಿಲ್ಲ” ಎಂದು ಪೀಠಕ್ಕೆ ತಿಳಿಸಿದ್ದರು.

ಪ್ರಾಸಿಕ್ಯೂಷನ್ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಬಿ.ಎನ್.ಜಗದೀಶ್, ”ಸಂತ್ರಸ್ತೆಯ ತಾಯಿ ಮತ್ತು ಯಡಿಯೂರಪ್ಪ ನಡುವಿನ ಆಡಿಯೋ ರೆಕಾರ್ಡಿಂಗ್ ನಾಶಪಡಿಸಲಾಗಿದೆ. ಅದು ಇಲ್ಲ ಎಂದಾದರೆ ಯಡಿಯೂರಪ್ಪ ಅವರು 2 ಲಕ್ಷ ರೂಪಾಯಿಯನ್ನು ಸಂತ್ರಸ್ತೆಗೆ ಏಕೆ ನೀಡಿದ್ದರು? ಸಂತ್ರಸ್ತೆಯ ತಾಯಿಯ ಮೊಬೈಲ್ ಕಸಿದು, ಸಹ ಆರೋಪಿ ಅರುಣ್ ಎಂಬವರು ಜಾಲತಾಣದಲ್ಲಿ ಅಪ್​ಲೋಡ್ ಮಾಡಲಾಗಿದ್ದ ಆಡಿಯೋ ರೆಕಾರ್ಡಿಂಗ್ ಡಿಲೀಟ್ ಮಾಡಿಸಿದ್ದಾರೆ. ಆದರೆ, ಸಂತ್ರಸ್ತೆ ಮೊಬೈಲ್​ನಲ್ಲಿ ಅಸಲಿ ಆಡಿಯೋ ಉಳಿದಿದೆ” ಎಂದು ಪೀಠಕ್ಕೆ ವಿವರಿಸಿದ್ದರು.

”ಅಲ್ಲದೇ, ಆಡಿಯೋದಲ್ಲಿರುವ ಧ್ವನಿಯು ಯಡಿಯೂರಪ್ಪ ಅವರದ್ದೇ ಎಂದು ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಖಾತರಿಪಡಿಸಿದೆ. ಸಂತ್ರಸ್ತೆಯನ್ನು ಖಾಸಗಿ ಕೊಠಡಿಗೆ ಕರೆದೊಯ್ದು ಬಿಎಸ್​​ವೈ ಆಕೆಯ ಎದೆಯನ್ನು ಕೈಯಿಂದ ಮುಟ್ಟಿ ಅದುಮಿದ್ದಾರೆ. ಸಂಜ್ಞೇ ಪರಿಗಣಿಸುವಾಗ ವಿಚಾರಣಾಧೀನ ನ್ಯಾಯಾಲಯವು ಇದನ್ನು ಪರಿಗಣಿಸಿದೆ. ಆ ನಂತರ ಸಂತ್ರಸ್ತೆಯು ಅಳುತ್ತಾ ಹೊರಬಂದಿದ್ದಾರೆ. ಇದನ್ನೂ ನ್ಯಾಯಾಲಯ ಪರಿಗಣಿಸಿದೆ” ಎಂದು ಪೀಠಕ್ಕೆ ವಿವರಿಸಿದರು. ಅರ್ಜಿಯ ಸಂಬಂಧ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಪೀಠ, ಆದೇಶವನ್ನು ಕಾಯ್ದಿರಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments