ಪೋಲೆಂಡ್ ನ ಇಗಾ ಸ್ವೆಟಿಕ್ ಮೊದಲ ಬಾರಿ ವಿಂಬಲ್ಡನ್ ಮಹಿಳೆಯ ಸಿಂಗಲ್ಸ್ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ 114 ವರ್ಷಗಳಲ್ಲೇ ಈ ಸಾಧನೆ ಮಾಡಿದ ಮೊದಲ ಆಟಗಾರ್ತಿ ಎಂಬ ಇತಿಹಾಸ ನಿರ್ಮಿಸಿದ್ದಾರೆ.
ಶನಿವಾರ ನಡೆದ ವನಿತೆಯರ ಸಿಂಗಲ್ಸ್ ಫೈನಲ್ ನಲ್ಲಿ ಇಗಾ ಸ್ವೆಟಿಕ್ 6-0, 6-0 ನೇರ ಸೆಟ್ ಗಳಿಂದ ಅಮೆರಿಕದ ಅಮಂಡಾ ಅನಿಸಿಮೊವಾ ಅವರನ್ನು ಸೋಲಿಸಿದರು. ಈ ಮೂಲಕ ಫೈನಲ್ ನಲ್ಲಿ ಎರಡೂ ಸೆಟ್ ಗಳನ್ನು ಎದುರಾಳಿಗೆ ಒಂದೂ ಸೆಟ್ ಬಿಟ್ಟುಕೊಡದೇ ಏಕಪಕ್ಷೀಯವಾಗಿ 1911ರ ನಂತರ ಗೆದ್ದ ಮೊದಲ ಆಟಗಾರ್ತಿ ಎಂಬ ಇತಿಹಾಸ ಬರೆದರು.
ಸೆಮಿಫೈನಲ್ ನಲ್ಲ್ ವಿಶ್ವದ ನಂಬರ್ ಒನ್ ಆಟಗಾರ್ತಿ ಅರೈನಾ ಸಬಲೆಂಕಾ ಅವರನ್ನು ಸೋಲಿಸಿ ಪ್ರಶಸ್ತಿ ಗೆಲ್ಲುವ ಹಾಟ್ ಫೇವರಿಟ್ ಆಗಿದ್ದ ಅಮಂಡಾ ಅವರನ್ನು ಏಕಪಕ್ಷೀಯವಾಗಿ ಇಗಾ ಸ್ವೆಟಿಕ್ ಮಣಿಸಿ ಅಧಿಕಾರಯುತ ಗೆಲುವಿನೊಂದಿಗೆ ಮೊದಲ ಬಾರಿ ವಿಂಬಲ್ಡನ್ ಪ್ರಶಸ್ತಿಗೆ ಮುತ್ತಿಟ್ಟರು.
ಇಗಾ ಸ್ವೆಟಿಕ್ ವಿಂಬಲ್ಡನ್ ಗೆದ್ದ ಮೊದಲ ಪೋಲೆಂಡ್ ಆಟಗಾರ್ತಿ ಎಂಬ ಮತ್ತೊಂದು ದಾಖಲೆಗೆ ಪಾತ್ರರಾದರು. ಅಲ್ಲದೇ ಇಗಾಗೆ ಇದು ಒಟ್ಟಾರೆ ೬ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಆಗಿದೆ. 1988ರಲ್ಲಿ ಫ್ರೆಂಚ್ ಓಪನ್ ನಲ್ಲಿ ನತಾಶಾ ಜ್ವೆರೆವಾ ವಿರುದ್ಧ ಸ್ಟೆಫಿಗ್ರಾಫ್ ಎದುರಾಳಿಗೆ ಒಂದೂ ಸೆಟ್ ಬಿಟ್ಟುಕೊಡದೇ ಗೆದ್ದಿದ್ದರು.



