ಆರಂಭಿಕ ಶುಭಮನ್ ಗಿಲ್ ಶತಕದ ನೆರವಿನಿಂದ ಭಾರತ ತಂಡ 142 ರನ್ ಗಳ ಭಾರೀ ಅಂತರದಿಂದ ಇಂಗ್ಲೆಂಡ್ ತಂಡವನ್ನು ಸೋಲಿಸಿ ಮೂರು ಪಂದ್ಯಗಳ ಏಕದಿನ ಸರಣಿಯನ್ನು 3-0ಯಿಂದ ವೈಟ್ ವಾಷ್ ಮಾಡಿದೆ.
ಅಹಮದಾಬಾದ್ ನಲ್ಲಿ ಬುಧವಾರ ನಡೆದ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಲು ಅವಕಾಶ ಪಡೆದ ಭಾರತ ತಂಡ 50 ಓವರ್ ಗಳಲ್ಲಿ 356 ರನ್ ಗೆ ಆಲೌಟ್ ಆಯಿತು. ಕಠಿಣ ಗುರಿ ಪಡೆದ ಇಂಗ್ಲೆಂಡ್ ತಂಡ 34.2 ಓವರ್ ಗಳಲ್ಲಿ 214 ರನ್ ಗೆ ಆಲೌಟಾಯಿತು.
ತಂಡದ ಪರ ಟಾಮ್ ಬಂಟನ್ (38), ಬೆನ್ ಡುಕೆಟ್ (34), ಫಿಲ್ ಸಾಲ್ಟ್ (22) ಮತ್ತು ಜೋ ರೂಟ್ (24) ಮಾತ್ರ ಸ್ವಲ್ಪಮಟ್ಟಿಗೆ ಹೋರಾಟ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.
ಭಾರತದ ಪರ ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ, ಅಕ್ಸರ್ ಪಟೇಲ್ ಮತ್ತು ಹಾರ್ದಿಕ್ ಪಾಂಡ್ಯ ತಲಾ 2 ವಿಕೆಟ್ ಪಡೆದು ಮಿಂಚಿದರು.



