ಭಾರತ ಮತ್ತು ಪಾಕಿಸ್ತಾನ ನಡುವೆ ಜೂನ್ 9ರಂದು ನ್ಯೂಯಾರ್ಕ್ ನಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಟೂರ್ನಿಯ ಟಿಕೆಟ್ ದರ ವ್ಯಾಪಕ ಟೀಕೆಗೆ ಗುರಿಯಾಗಿದೆ.
ಟಿ-20 ವಿಶ್ವಕಪ್ ನ ಹೈವೋಲ್ಟೇಜ್ ಪಂದ್ಯ ಎಂದೇ ಹೇಳಲಾಗಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಟಿಕೆಟ್ ದರ 20 ಸಾವಿರ ಡಾಲರ್ ಅಂದರೆ 16.6 ಲಕ್ಷ ರೂ. ನಿಗದಿಪಡಿಸಲಾಗಿದೆ. ಇಷ್ಟು ದೊಡ್ಡ ಮೊತ್ತ ನಿಗದಿಪಡಿಸಿದರೆ ಅಭಿಮಾನಿಗಳು ಮೈದಾನಕ್ಕೆ ಹೇಗೆ ಬರುತ್ತಾರೆ ಎಂಬ ಪ್ರಶ್ನೆ ಉದ್ಭವವಾಗಿದೆ.
ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಸರಣಿ ನಡೆದು ದಶಕಗಳೇ ಆಗಿವೆ. ಎರಡೂ ತಂಡಗಳು ವಿಶ್ವಕಪ್ ನಂತರ ಟೂರ್ನಿಯಲ್ಲಿ ಮಾತ್ರ ಎದುರಾಗುತ್ತಿವೆ. ಇದರಿಂದ ಸಾಂಪ್ರದಾಯಿಕ ಎದುರಾಳಿಗಳ ನಡುವಣ ರೋಚಕ ಪಂದ್ಯ ವೀಕ್ಷಣೆಗೆ ಕುತೂಹಲ ಹೆಚ್ಚಾಗಿದೆ.
ಅಮೆರಿಕದ ನ್ಯೂಯಾರ್ಕ್ ನಲ್ಲಿ ನಾಸೌ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದ ಟಿಕೆಟ್ ದರ 20 ಸಾವಿರ ಡಾಲರ್ ಅಂದರೆ ಸುಮಾರು 16.6 ಲಕ್ಷ ರೂ. ಆಗಿದೆ. ಇದು ಕ್ರೀಡಾ ವಿರೋಧಿ ದರ ಎಂದು ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈದಾನದ ಪ್ರವೇಶ ದರ 2750 ರೂ.ಗಿಂತ ಹೆಚ್ಚು ನಿಗದಿಪಡಿಸುವುದು ಸಮಂಜಸ ಅಲ್ಲ. ಆದರೆ 20 ಸಾವಿರ ಡಾಲರ್ ನಿಗದಿಪಡಿಸಿದ್ದಾರೆ ಎಂಬ ಸುದ್ದಿ ಕೇಳಿ ಆಘಾತವಾಯಿತು ಎಂದು ಲಲಿತ್ ಮೋದಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.