ಭಾರತ ವನಿತೆಯರ ತಂಡ 82 ರನ್ ಗಳಿಂದ ಶ್ರೀಲಂಕಾ ತಂಡವನ್ನು ಸೋಲಿಸಿ ವನಿತೆಯರ ಟಿ-20 ವಿಶ್ವಕಪ್ ಇತಿಹಾಸದಲ್ಲೇ ಅತೀ ದೊಡ್ಡ ಗೆಲುವಿನ ದಾಖಲೆ ಬರೆದಿದೆ.
ದುಬೈನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 3 ವಿಕೆಟ್ ಕಳೆದುಕೊಂಡು 172 ರನ್ ಸಂಪಾದಿಸಿತು. ಕಠಿಣ ಗುರಿ ಬೆಂಬತ್ತಿದ ಶ್ರೀಲಂಕಾ 19.5 ಓವರ್ ಗಳಲ್ಲಿ 90 ರನ್ ಗೆ ಆಲೌಟಾಯಿತು.
ಈ ಗೆಲುವಿನೊಂದಿಗೆ ಭಾರತ ಎ ಗುಂಪಿನಲ್ಲಿ ರನ್ ಸರಾಸರಿಯಲ್ಲಿ ಶ್ರೀಲಂಕಾ ತಂಡವನ್ನು ಹಿಂದಿಕ್ಕಿ ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಅಲ್ಲದೇ ವಿಶ್ವಕಪ್ ಇತಿಹಾಸದಲ್ಲೇ ರನ್ ಗಳ ಆಧಾರದಲ್ಲಿ ಭಾರತಕ್ಕೆ ಇದು ಅತೀ ದೊಡ್ಡ ಗೆಲುವಾಗಿದೆ.
ಕಠಿಣ ಗುರಿ ಬೆಂಬತ್ತಿದ ಶ್ರೀಲಂಕಾ ತಂಡದ ಆಟಗಾರ್ತಿಯರು ಭಾರತದ ದಾಳಿ ಎದುರಿಸಲು ವಿಫಲರಾಗಿ ಪೆವಿಲಿಯನ್ ಪೆರೇಡ್ ನಡೆಸಿದರು. ಅರುಂಧತಿ ರೆಡ್ಡಿ ಮತ್ತು ಆಶಾ ಶೋಭನಾ ತಲಾ 3 ವಿಕೆಟ್ ಕಬಳಿಸಿದರೆ, ರೇಣುಕಾ ಸಿಂಗ್ 2 ವಿಕೆಟ್ ಪಡೆದರು. ಶ್ರೀಲಂಕಾ ಪರ ಕವಿಶಾ ದಿಲ್ಲಾರಿ (21), ಅನುಷ್ಕಾ ಸಂಜೀವಿನಿ (20) ಮತ್ತು ಅಮಾ ಕಾಂಚನಾ (19) ಮಾತ್ರ ಎರಡಂಕಿಯ ಮೊತ್ತ ಗಳಿಸಲಷ್ಟೇ ಶಕ್ತರಾದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಭಾರತ ತಂಡಕ್ಕೆ ಶೆಫಾಲಿ ಶರ್ಮ (43) ಮತ್ತು ಸ್ಮೃತಿ ಮಂದಾನ (50) ಮೊದಲ ವಿಕೆಟ್ ಗೆ 98 ರನ್ ಪೇರಿಸಿ ಮಿಂಚಿನ ಆರಂಭ ನೀಡಿದರು. ಸ್ಮೃತಿ ಮಂದಾನ 38 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 50 ರನ್ ಬಾರಿಸಿ ಔಟಾದರೆ, ನಾಯಕಿ ಹರ್ಮನ್ ಪ್ರೀತ್ ಕೌರ್ 27 ಎಸೆತಗಳಲ್ಲಿ 8 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 52 ರನ್ ಗಳಿಸಿ ತಂಡದ ಮೊತ್ತವನ್ನು ಉಬ್ಬಿಸಿದರು.