ರಷ್ಯಾದ ಕಾಮ್ಚಟ್ಕಾದಲ್ಲಿ ಸಂಭವಿಸಿದ 8.8 ತೀವ್ರತೆಯ ಪ್ರಬಲ ಭೂಕಂಪನದಿಂದ ಸೃಷ್ಟಿಯಾದ ಸುನಾಮಿ ಅಲೆಗಳು ರಷ್ಯಾ, ಜಪಾನ್ ಮತ್ತು ಅಮೆರಿಕದ ಕ್ಯಾಲಿಫೋರ್ನಿಯಾಗೆ ಅಪ್ಪಳಿಸಿದ್ದು, 30 ರಾಷ್ಟ್ರಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದೆ.
ಹೊಕಾಯ್ಡೊ ದ್ವೀಪದಿಂದ ಸುಮಾರು 250 ಕಿ.ಮೀ. ದೂರದಲ್ಲಿ ಬುಧವಾರ ಬೆಳಿಗ್ಗೆ 10.30ರ ಸುಮಾರಿಗೆ ಸಂಭವಿಸಿದ ಭೂಕಂಪನ ರಿಕ್ಟರ್ ಮಾಪಕದಲ್ಲಿ 8.8 ತೀವ್ರತೆ ದಾಖಲಿಸಿದೆ. ಇದು 1952ರ ನಂತರ ರಷ್ಯಾದಲ್ಲಿ ಸಂಭವಿಸಿದ ಅತೀ ದೊಡ್ಡ ಹಾಗೂ ಒಟ್ಟಾರೆ 8ನೇ ಅತೀ ದೊಡ್ಡ ಭೂಕಂಪನವಾಗಿದೆ.
ಪ್ರಬಲ ಭೂಕಂಪನ ಸಂಭವಿಸಿದ ಬೆನ್ನಲ್ಲೇ ಕಾಣಿಸಿಕೊಂಡ ಸುನಾಮಿ ಅಲೆಗಳು ರಷ್ಯಾ ಹಾಗೂ ಜಪಾನ್ ಕಾಣಿಸಿಕೊಂಡಿದ್ದು, ಜಪಾನ್ ನಲ್ಲಿ ಸುಮಾರು 5 ಅಡಿ ಎತ್ತರದ ಅಲೆಗಳು ಕಾಣಿಸಿಕೊಂಡಿವೆ. ಬಂದರು ಪ್ರದೇಶಗಳು ಜಲಾವೃತಗೊಂಡಿದ್ದು, ಜಪಾನ್ ಕಡಲ ತೀರಕ್ಕೆ ಮೃತಪಟ್ಟ 4 ವೇಲ್ಸ್ ಮೀನುಗಳು ಬಂದು ಬಿದ್ದಿವೆ.
ಅಮೆರಿಕದ ಕ್ಯಾಲಿಫೋರ್ನಿಯಾ, ವಾಷಿಂಗ್ಟನ್, ಒರೆಗಾನ್ ಕಡಲ ತೀರಗಳಿಗೆ ಅಪ್ಪಳಿಸಿದ್ದು, ಕರಾವಳಿ ತೀರ ಪ್ರದೇಶಗಳು ಜಲಾವೃತಗೊಂಡಿವೆ. ಪರ್ಲ್ ಹಾರ್ಬರ್ ಬಂದರು ಕೂಡ ಸಾಕಷ್ಟು ಹಾನಿಯಾಗಿದೆ.
ಫೆಸಿಫಿಕ್ ಮಹಾಸಾಗರದಲ್ಲಿ ಸುನಾಮಿ ಅಲೆಗಳು ಕಾಣಿಸಿಕೊಂಡಿದ್ದು, ಜಪಾನ್ ನಲ್ಲಿ ಸಾಮಾನ್ಯಕ್ಕಿಂತ ಎರಡು ಅಡಿ ಎತ್ತರದ ಅಲೆಗಳು ಕಾಣಿಸಿಕೊಂಡಿದ್ದರೆ, ಕ್ಯಾಲಿಫೋರ್ನಿಯಾದಲ್ಲಿ 1 ಅಡಿ ಎತ್ತರದ ಅಲೆಗಳು ಕಾಣಿಸಿಕೊಂಡಿವೆ. ಅಮೆರಿಕದ ಹಲವೆಡೆ 1.4, 1.6 1.2 ಅಡಿಗಳಷ್ಟು ಎತ್ತರದ ಅಲೆಗಳು ಕಾಣಿಸಿಕೊಂಡಿವೆ.
ಹವಾಯಿ ದ್ವೀಪದ ಹೊನಲುಲು ವಿಮಾನ ನಿಲ್ದಾಣದಲ್ಲಿ ವಿಮಾನ ಸಂಚಾರ ಸ್ಥಗಿತಗೊಳಿಸಲಾಗಿದೆ. ಹವಾಯಿ ದ್ವೀಪದಲ್ಲಿ ಅಮೆರಿಕದ ವಾಯು ಪಡೆಯ ಸೇನಾ ನೆಲೆಗಳಿದ್ದು, ಅವುಗಳನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗುತ್ತಿದೆ.


