ಟರ್ಕಿ ಉತ್ತರ ಟರ್ಕಿ ರೆಸಾರ್ಟ್ ನಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 66 ಮಂದಿ ಮೃತಪಟ್ಟಿದ್ದು, ಹಲವಾರು ಮಂದಿ ಜೀವರಕ್ಷಣೆಗೆ ಹಾರಿ ಜೀವ ಕಳೆದುಕೊಂಡಿದ್ದಾರೆ.
ರಾಜಧಾನಿ ಅಂಕಾರದಿಂದ 100 ಕಿ.ಮೀ. ದೂರದ ಕಾರ್ತಾಲಕಾಯ ಪಟ್ಟಣದ ಪರ್ವತಗಳ ನಡುವೆ ಇರುವ ಸ್ಕೀ ಹೋಟೆಲ್ ರೆಸಾರ್ಟ್ ನಲ್ಲಿ ಅಗ್ನಿ ದುರಂತದಲ್ಲಿ 66 ಮಂದಿ ಮೃತಪಟ್ಟಿದ್ದು, 51ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಹಲವಾರು ಸಚಿವರು ಧಾವಿಸಿದ್ದು, ಅಗ್ನಿಗೆ ಇಡೀ ಹೋಟೆಲ್ ಹೊತ್ತಿ ಉರಿದಿದ್ದು, ಹಲವಾರು ಮಂದಿ ಜೀವ ರಕ್ಷಣೆಗೆ ಹೋಟೆಲ್ ಮೇಲಿಂದ ಹಾರಿ ಜೀವ ಕಳೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಮರದಿಂದ ನಿರ್ಮಿಸಲಾದ 12 ಅಂತಸ್ತಿನ ಹೋಟೆಲ್ ಇದಾಗಿದ್ದು, ಹಿಮದ ನಡುವೆ ಆಡಲು ದೇಶ-ವಿದೇಶಗಳಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಈ ಪ್ರದೇಶಕ್ಕೆ ಭೇಟಿ ನೀಡುತ್ತಾರೆ.
ಎರಡು ವಾರಗಳ ಶಾಲೆಗೆ ರಜೆ ಇದ್ದಿದ್ದರಿಂದ 234ಕ್ಕೂ ಹೆಚ್ಚಿನ ಸಂಖ್ಯೆ ಜನರು ಹೋಟೆಲ್ ನಲ್ಲಿ ನೋಂದಣಿ ಮಾಡಿಕೊಂಡಿದ್ದರು. ರೆಸ್ಟೋರೆಂಟ್ ವಿಭಾಗದಲ್ಲಿ ಮೊದಲ ಬಾರಿ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗಿದ್ದು, ನಂತರ ಅದು ಇಡೀ ಹೋಟೆಲ್ ಗೆ ವ್ಯಾಪಿಸಿದೆ ಎಂದು ಸಚಿವರು ಹೇಳಿಕೆ ನೀಡಿದ್ದಾರೆ.