ಇಸ್ರೇಲ್ ಮೇಲೆ 200 ಕ್ಷಿಪಣಿ ದಾಳಿ ಮಾಡಲಾಗಿದೆ ಎಂದು ಇರಾನ್ ಹೇಳಿಕೊಂಡಿದೆ. ವಿಶೇಷ ಅಂದರೆ ಇದೇ ಮೊದಲ ಬಾರಿಗೆ ಹೈಪರ್ ಸಾನಿಕ್ ಕ್ಷಿಪಣಿ ಬಳಸಿದೆ.
ಇರಾನ್ ದಾಳಿ ಬೆನ್ನಲ್ಲೇ ಪ್ರತಿಕಾರ ಎದುರಿಸಲು ಸಜ್ಜಾಗಿ ಎಂದು ಇಸ್ರೇಲ್ ಎಚ್ಚರಿಕೆ ನೀಡಿದರೆ, ಇಸ್ರೇಲ್ ಮೇಲಿನ ದಾಳಿ ತಡೆಯಲು ಸಜ್ಜಾಗಿ ಎಂದು ಅಮೆರಿಕ ಸೇನೆಗೆ ಅಧ್ಯಕ್ಷ ಜೋ ಬಿಡೈನ್ ಸೂಚಿಸಿದ್ದಾರೆ. ಇದರಿಂದ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧದ ಕಾರ್ಮೊಡ ದಟ್ಟವಾಗಿದೆ.
ಇಸ್ರೇಲಿನ ಐರನ್ ಡೋಮ್ ತಪ್ಪಿಸಲು ಫತಾಹ್ ಹೈಪರ್ ಸಾನಿಕ್ ಕ್ಷಿಪಣಿಯನ್ನು ಇದೇ ಮೊದಲ ಬಾರಿಗೆ ಪ್ರಯೋಗಿಸಿದ್ದೇವೆ ಎಂದು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ತಿಳಿಸಿದೆ. ಈ ಹಿಂದೆ ನಡೆಸಿದ ದಾಳಿಯನ್ನು ಇಸ್ರೇಲ್ ವಿಫಲಗೊಳಿಸಿದ ಹಿನ್ನೆಲೆಯಲ್ಲಿ ಹೊಸ ಮಾದರಿಯ ದಾಳಿ ನಡೆಸಲಾಗಿದೆ.
ಶಬ್ದಕ್ಕಿಂತ ವೇಗವಾಗಿ ಚಲಿಸುವ ಸಾಮರ್ಥ್ಯ ಹೈಪರ್‌ಸಾನಿಕ್ ಕ್ಷಿಪಣಿಗಳಿಗಿದ್ದು ಇರಾನ್ ಕಳೆದ ವರ್ಷದ ಜೂನ್‌ನಲ್ಲಿ ಫತಾಹ್-1, ನವೆಂಬರ್‌ನಲ್ಲಿ ಫತಾಹ್- 2 ಕ್ಷಿಪಣಿ ಪರೀಕ್ಷೆ ನಡೆಸಿತ್ತು. ಬಳಸಲಾದ ಶೇ.80-90ರಷ್ಟು ಕ್ಷಿಪಣಿಗಳು ನಿಗದಿತ ಗುರಿ ತಲುಪುತ್ತವೆ ಎಂದು ಸೇನೆ ಹೇಳಿಕೊಂಡಿದೆ.
ಇಸ್ರೇಲ್ ರಾಜಧಾನಿ ಟೆಲ್ ಅವೀವ್‌ನಲ್ಲಿರುವ ಗುಪ್ತಚರ ಸಂಸ್ಥೆ ಮೊಸ್ಸಾದ್ ಕೇಂದ್ರ ಕಚೇರಿ, ಅಮೆರಿಕ ನಿರ್ಮಿಸಿದ ಎಫ್ 16 ವಿಮಾನಗಳನ್ನು ನಿಲ್ಲಿಸಿರುವ ವಾಯುನೆಲೆಗಳನ್ನು ಗುರಿಯಾಗಿಸಿ ಇರಾನ್ ಕ್ಷಿಪಣಿ ದಾಳಿ ನಡೆಸಿದೆ ಎಂದು ವರದಿಗಳು ಪ್ರಕಟವಾಗಿದೆ.