Saturday, June 27, 2026
Google search engine
Homeರಾಜಕೀಯಜ್ಯೋತಿಷಿಗಳ ಸಲಹೆಯಂತೆ ಜೆಡಿಎಸ್‌ ಚಿಹ್ನೆ ಬದಲಾವಣೆಗೆ ನಿರ್ಧಾರ: ತೆನೆ ಹೊತ್ತ ಮಹಿಳೆ ಚಿಹ್ನೆಗೆ ಚಕ್ರ ಸೇರ್ಪಡೆ?

ಜ್ಯೋತಿಷಿಗಳ ಸಲಹೆಯಂತೆ ಜೆಡಿಎಸ್‌ ಚಿಹ್ನೆ ಬದಲಾವಣೆಗೆ ನಿರ್ಧಾರ: ತೆನೆ ಹೊತ್ತ ಮಹಿಳೆ ಚಿಹ್ನೆಗೆ ಚಕ್ರ ಸೇರ್ಪಡೆ?

ಮುಂಬರುವ ಚುನಾವಣೆಗಳಲ್ಲಿ ಪಕ್ಷ ಉತ್ತಮ ಸಾಧನೆ ಮಾಡಲು ಜಾತ್ಯತೀತ ಜನತಾದಳ ಪಕ್ಷದ ಚಿಹ್ನೆಯಲ್ಲಿ ಬದಲಾವಣೆ ತರಲು ನಿರ್ಧರಿಸಿದ್ದು, ಈಗಿರುವ ತೆನೆಹೊತ್ತ ಮಹಿಳೆಯ ಜೊತೆಗೆ ಚಕ್ರ ಸೇರ್ಪಡೆಗೆ ನಿರ್ಧರಿಸಲಾಗಿದೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಜ್ಯೋತಿಷಿಗಳ ಸಲಹೆಯಂತೆ ಪಕ್ಷದ ಚಿಹ್ನೆಯಲ್ಲಿ ಬದಲಾವಣೆ ಮಾಡಲು ನಿರ್ಧರಿಸಿದ್ದು, ಅವರ ಈ ಪ್ರಸ್ತಾವನೆಗೆ ಪಕ್ಷದ ಮುಖಂಡರು ಸಮ್ಮತಿ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಪಕ್ಷದ ಚಿಹ್ನೆಯಲ್ಲಿ ಬದಲಾವಣೆ ಕುರಿತು ಕೇಂದ್ರ ಚುನಾವಣಾ ಆಯೋಗದ ಅನುಮತಿಗೆ ಪತ್ರ ಬರೆಯುವ ಸಾಧ್ಯತೆ ಇದೆ.

ತೆನೆ ಹೊತ್ತ ಮಹಿಳೆ. ಜನತಾದಳ (ಜಾತ್ಯತೀತ) ಪಕ್ಷದ ಅಧಿಕೃತ ಚಿಹ್ನೆ. 2001ರಿಂದ ಜೆಡಿಎಸ್ ಈ ಚುನಾವಣಾ ಚಿಹ್ನೆಯೊಂದಿಗೆ ಕಣಕ್ಕಿಳಿಯುತ್ತಿದೆ. ಆದರೆ ಈ ಚಿಹ್ನೆಯಡಿ ಪಕ್ಷ ದಿನದಿಂದ ದಿನಕ್ಕೆ ಚುನಾವಣೆಗಳಲ್ಲಿ ಕಳಪೆ ಪ್ರದರ್ಶನ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಈಗ ಜೆಡಿಎಸ್ ಪಕ್ಷ ಈ ಚಿಹ್ನೆಗೆ ಹೊಸ ರೂಪ ನೀಡಲು ತೀರ್ಮಾನಿಸಿದೆ.

ಜೆಡಿಎಸ್ ಪಕ್ಷ ಚುನಾವಣೆ ಸೋಲುಗಳೊಂದಿಗೆ ಸಂಕಷ್ಟ ಸ್ಥಿತಿಯನ್ನು ಅನುಭವಿಸುತ್ತಿದೆ. ಈಗಾಗಲೇ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಇದೀಗ ಚುನಾವಣಾ ಅದೃಷ್ಟ ಬದಲಾಯಿಸಲು ಕಸರತ್ತು ನಡೆಸುತ್ತಿದೆ. ಈ ನಿಟ್ಟಿನಲ್ಲಿ ಪಕ್ಷದ ಚುನಾವಣಾ ಚಿಹ್ನೆಗೆ ಹೆಚ್ಚುವರಿಯಾಗಿ ಈ ಹಿಂದೆ ಜನತಾದಳದ ಚಿಹ್ನೆಯಾಗಿ ಬಳಸಲಾಗುತ್ತಿದ್ದ ಚಕ್ರ ಸೇರ್ಪಡೆ ಮಾಡಲಿದೆ.

ಅದೃಷ್ಟಕ್ಕಾಗಿ ಜ್ಯೋತಿಷಿಗಳ ಸಲಹೆ

ಚಿಹ್ನೆ ಬದಲಾವಣೆ ಹಿಂದೆ ಭಾವನಾತ್ಮಕ ಲೆಕ್ಕಾಚಾರಗಳಿವೆ. ತೆನೆ ಹೊತ್ತ ಮಹಿಳೆ ಚಿಹ್ನೆಯ ಹಿಂದೆ ಚಕ್ರ ಸೇರಿಸುವುದರಿಂದ ಚಲನೆ (Motions) ಕಾಣುತ್ತದೆ. ಇದು ಪಕ್ಷಕ್ಕೆ ಸಕಾರಾತ್ಮಕ ಶಕ್ತಿಯನ್ನ ಕೊಡುತ್ತದೆ. ಪಕ್ಷದ ಚಿಹ್ನೆಯ ಜೊತೆ ಪೂರ್ಣ ವೃತ್ತ ಹಾಕುವುದರಿಂದ ಪಕ್ಷಕ್ಕೆ ಅಭ್ಯುದಯ, ಶ್ರೇಯಸ್ಸು ಎಂದು ವಾಸ್ತುಶಾಸ್ತ್ರದ ಅಭಿಮತ. ಸಂಕ್ರಾತಿ ಪಥ ಬದಲು ಜೆಡಿಎಸ್​​ನಲ್ಲೂ ಬದಲಾವಣೆ ಕಾಣಲಿದೆ ಎಂಬುದು ದೇವೇಗೌಡರ ನಂಬಿಕೆಯಾಗಿದೆ. ಈ ಸಂಬಂಧ ದೇವೇಗೌಡರ ಅದೃಷ್ಟದ ಲೆಕ್ಕಾಚಾರವೂ ಹೊಂದಲಾಗಿದೆ. ದೇವೇಗೌಡರು ಯಾವುದೇ ತೀರ್ಮಾನ ಕೈಗೊಂಡರು ಜ್ಯೋತಿಷಿಗಳ ಸಲಹೆಯಂತೆ ಮುನ್ನಡೆಯುತ್ತಾರೆ‌. ಈ ಚಿಹ್ನೆ ಬದಲಾವಣೆಯಲ್ಲೂ ಜ್ಯೋತಿಷಿಗಳ ಸಲಹೆ ಪ್ರಮುಖ ಪಾತ್ರ ವಹಿಸಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಚುನಾವಣಾ ಆಯೋಗಕ್ಕೆ ಪ್ರಸ್ತಾಪ ಸಲ್ಲಿಸಲು ತೀರ್ಮಾನ

ಈ ಸಂಬಂಧ ಜೆಡಿಎಸ್ ಚುನಾವಣಾ ಆಯೋಗಕ್ಕೆ ಚಿಹ್ನೆ ಬದಲಾವಣೆಗೆ ಪ್ರಸ್ತಾಪ ಸಲ್ಲಿಸಲು ನಿರ್ಧರಿಸಿದೆ. ಚಕ್ರ ಸೇರ್ಪಡೆಯಿಂದ ಪಕ್ಷಕ್ಕೆ ಸಕಾರಾತ್ಮಕ ಚೈತನ್ಯ ಸಿಗುತ್ತೆ ಎಂಬ ನಂಬಿಕೆ ಹೆಚ್.ಡಿ.ದೇವೇಗೌಡರದ್ದಾಗಿದೆ. ಈ ಹಿಂದೆ ಜನತಾದಳ ಪಕ್ಷ ಚಕ್ರದ ಗುರುತು ಹೊಂದಿತ್ತು.‌ ಈಗ ಅದೇ ಚಕ್ರದ ಚಿಹ್ನೆಯನ್ನು ತೆನೆ ಹೊತ್ತ ಮಹಿಳೆಯ ಜೊತೆ ಸೇರ್ಪಡೆಗೊಳಿಸಲು ಮುಂದಾಗಿದೆ.

ಹೊಸ ವರ್ಷ 2026ರಲ್ಲೇ ಪಕ್ಷದ ಚುನಾವಣಾ ಚಿಹ್ನೆಗೆ ಈ ಹೊಸ ಬದಲಾವಣೆ ತರಲು‌ ಜೆಡಿಎಸ್ ನಿರ್ಧರಿಸಿದೆ‌. ನಿನ್ನೆ ಕೋರ್ ಕಮಿಟಿ ಸಭೆಯಲ್ಲಿ ದೇವೇಗೌಡರ ಸಲಹೆಯಂತೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಸಂಬಂಧ ಚುನಾವಣಾ ಆಯೋಗಕ್ಕೆ ಶೀಘ್ರದಲ್ಲೇ ಅರ್ಜಿ ಸಲ್ಲಿಸಲು ಮುಂದಾಗಿದೆ. ಚುನಾವಣಾ ಆಯೋಗದಿಂದ ಚಿಹ್ನೆ ಬದಲಾವಣೆಗೆ ಅನುಮತಿ ಸಿಕ್ಕರೆ ಸ್ಥಳೀಯ ಸಂಸ್ಥೆ ಚುನಾವಣೆ,‌ ಬಿಬಿಎಂಪಿ‌ ಚುನಾವಣೆಗೆ ಹೊಸ ಚಿಹ್ನೆ ಬಳಕೆ ಮಾಡಲು ತೀರ್ಮಾನಿಸಲಾಗಿದೆ.

ಈ ಹಿಂದೆ ಟ್ರ್ಯಾಕ್ಟರ್ ಚಿಹ್ನೆ ಹೊಂದಿದ್ದ ಜೆಡಿಎಸ್: ಈ ಹಿಂದೆ ಜೆಡಿಎಸ್ ಪಕ್ಷ ಟ್ರ್ಯಾಕ್ಟರ್ ಚಿಹ್ನೆಯನ್ನು ಹೊಂದಿತ್ತು. ರೈತರು ಬಳಸುವ ಟ್ರ್ಯಾಕ್ಟರ್ ಅ​​​ನ್ನೇ ಚುನಾವಣಾ ಚಿಹ್ನೆಯಾಗಿ ಅಳವಡಿಸಿಕೊಂಡಿತ್ತು. ಆದರೆ, ಟ್ರ್ಯಾಕ್ಟರ್ ವಾಹನವನ್ನೇ ಹೋಲುವ ಇತರ ಚಿಹ್ನೆಗಳನ್ನು ಪಕ್ಷೇತರ ಅಭ್ಯರ್ಥಿಗಳು ವಿಧಾನಸಭಾ ಕ್ಷೇತ್ರಗಳಲ್ಲಿ ಪಡೆದಿದ್ದರಿಂದ ಜನತಾದಳದ ಅಭ್ಯರ್ಥಿಗಳಿಗೆ ಕೆಲವೆಡೆ ಸೋಲು ಉಂಟಾಗಿತ್ತು. ಪಕ್ಷೇತರ ಅಭ್ಯರ್ಥಿಗಳು ರೋಡ್ ರೋಲರ್, ಜೀಪು, ರೈಲು ಇಂಜಿನ್​​ನ್ನು ಚಿಹ್ನೆಯಾಗಿ ಬಳಸುತ್ತಿದ್ದರಿಂದ ಮತದಾರರಿಗೆ ಗೊಂದಲ ಉಂಟಾಗುತ್ತಿತ್ತು. ಇದರಿಂದ ವಾಹನಗಳ ಚಿಹ್ನೆ ಹೊಂದಿದ್ದ ಪಕ್ಷೇತರ ಅಭ್ಯರ್ಥಿಗಳು ಜೆಡಿಎಸ್ ಅಭ್ಯರ್ಥಿಗಳ ಮತ ತಿನ್ನುತ್ತಿದ್ದರು.

ಈ ಹಿನ್ನೆಲೆಯಲ್ಲಿ ಹೆಚ್.ಡಿ.ದೇವೇಗೌಡರು 2001 ಡಿಸೆಂಬರ್​ನಲ್ಲಿ ಜೆಡಿಎಸ್ ಪಕ್ಷದ ಟ್ರ್ಯಾಕ್ಟರ್ ಚುನಾವಣಾ ಚಿಹ್ನೆಯನ್ನು ಬದಲಾಯಿಸಲು ತೀರ್ಮಾನಿಸಿದ್ದರು. ಹೀಗಾಗಿ, ಟ್ರ್ಯಾಕ್ಟರ್ ಚುನಾವಣಾ ಚಿಹ್ನೆ ಬದಲಾಯಿಸಿ, ತೆನೆ ಹೊತ್ತ ಮಹಿಳೆಯ ಗುರುತಿನ ಚುನಾವಣಾ ಚಿಹ್ನೆ ಅಳವಡಿಸಿಕೊಳ್ಳಲಾಯಿತು.‌ ಇದೀಗ 24 ವರ್ಷದ ಬಳಿಕ ಜೆಡಿಎಸ್ ಪಕ್ಷ ಮತ್ತೊಮ್ಮೆ ಚಿಹ್ನೆಯಲ್ಲಿ ಬದಲಾವಣೆ ತರಲು ತೀರ್ಮಾನಿಸಿದೆ. 2026ರಲ್ಲಿ ಈಗ ತೆನೆ ಹೊತ್ತ ರೈತ ಮಹಿಳೆಯ ಜೊತೆಗೆ ಚಕ್ರವನ್ನು ಸೇರಿಸಲು ತೀರ್ಮಾನಿಸಲಾಗಿದೆ.

ಅದೃಷ್ಟ ಖುಲಾಯಿಸುವ ನಂಬಿಕೆಯಲ್ಲಿ ಜೆಡಿಎಸ್

ಚಿಹ್ನೆ ಬದಲಾವಣೆಯಿಂದ ಜೆಡಿಎಸ್ ಪಕ್ಷಕ್ಕೆ ಚುನಾವಣೆಯಲ್ಲಿ ಅದೃಷ್ಟ ಖುಲಾಯಿಸುತ್ತೆ ಎಂಬುದು ದೇವೇಗೌಡ ಕುಟುಂಬದ ಬಲವಾದ ನಂಬಿಕೆಯಾಗಿದೆ. ಪರಿಷ್ಕೃತ ಚುನಾವಣಾ ಚಿಹ್ನೆಗೆ ಕೇಂದ್ರ ಚುನಾವಣಾ ಆಯೋಗದಿಂದ ಅನುಮತಿ ಸಿಕ್ಕರೆ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗೆ ಹೊಸ ಚಿಹ್ನೆಯೊಂದಿಗೆ ಅಖಾಡಕ್ಕಿಳಿಯಲಿದೆ.

ಚುನಾವಣಾ ಚಿಹ್ನೆಗೆ ಅಷ್ಟು ಬೇಗ ಅನುಮತಿ ಸಿಗದೇ ಇದ್ದರೆ, ಮುಂದಿನ 2028ರ ವಿಧಾನಸಭಾ ಚುನಾವಣೆಗೆ ಹೊಸ ಚಿಹ್ನೆ ಪಡೆದು ಸ್ಪರ್ಧಿಸುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಪಕ್ಷವನ್ನು ಮತ್ತೆ ಬಲಪಡಿಸಲು ದೇವೇಗೌಡರು ಪಣ ತೊಟ್ಟಿದ್ದು, ಪಕ್ಷ ಸಂಘಟನೆ, ಪುನರಚನೆ ಬಳಿಕ ಇದೀಗ ಚಿಹ್ನೆಗೆ ಹೊಸ ರೂಪ ನೀಡಲು ಮುಂದಾಗಿದ್ದಾರೆ. ಆ ಮೂಲಕ ಚುನಾವಣಾ ಅದೃಷ್ಟದ ನಿರೀಕ್ಷೆಯಲ್ಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments