ಭಾರತದ ರನ್ ಮಷಿನ್ ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 28,000 ರನ್ ಪೂರೈಸಿ ಹಲವು ದಾಖಲೆ ಮುರಿದಿದ್ದಾರೆ.
ವಡೋದರಾದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅರ್ಧಶತಕ ಪೂರೈಸಿದ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 28,000 ರನ್ ಪೂರೈಸಿದರು. ಈ ಮೂಲಕ ಅತ್ಯಂತ ವೇಗವಾಗಿ 28,000 ರನ್ ಪೂರೈಸಿ ಸಚಿನ್ ತೆಂಡೂಲ್ಕರ್ ದಾಖಲೆ ಮುರಿದರು. ಅಲ್ಲದೇ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ ಎನಿಸಿಕೊಂಡರು.
ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡ ಡ್ರೈಲ್ ಮಿಚೆಲ್ 71 ಎಸೆತಗಳಲ್ಲಿ 84 ರನ್ ನೆರವಿನಿಂದ 8 ವಿಕೆಟ್ ಕಳೆದುಕೊಂಡು 300 ರನ್ ಗಳಿಸಿದೆ. ಸ್ಪರ್ಧಾತ್ಮಕ ಮೊತ್ತ ಬೆಂಬತ್ತಿದ ಭಾರತ ತಂಡಕ್ಕೆ ಶುಭಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ಶತಕದ ಜೊತೆಯಾಟದಿಂದ ತಂಡವನ್ನು ಆಧರಿಸಿದರು.
ಕೊಹ್ಲಿ 624 ಇನಿಂಗ್ಸ್ ಗಳಲ್ಲಿ 28,000 ರನ್ ಪೂರೈಸಿ ಅತ್ಯಂತ ವೇಗವಾಗಿ ಪೂರೈಸಿದ ದಾಖಲೆ ಬರೆದರು. ಇದಕ್ಕೂ ಮುನ್ನ ಸಚಿನ್ ಈ ದಾಖಲೆ ಬರೆಯಲು 20 ಹೆಚ್ಚು ಪಂದ್ಯಗಳನ್ನು ತೆಗೆದುಕೊಂಡಿದ್ದರು. ವಿರಾಟ್ ಕೊಹ್ಲಿ 28,018 ರನ್ ದಾಟುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ ಎಂಬ ದಾಖಲೆ ಬರೆದರು. ಸಚಿನ್ ತೆಂಡೂಲ್ಕರ್ 34,357 ರನ್ ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ.



