ಆರಂಭಿಕ ಕೆಎಲ್ ರಾಹುಲ್ ಸಿಡಿಸಿದ ಅರ್ಧಶತಕದ ಹೊರತಾಗಿಯೂ ಕರ್ನಾಟಕ ರಣಜಿ ಟ್ರೋಫಿ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಮುನ್ನಡೆಗಾಗಿ ಹೋರಾಟ ನಡೆಸಿದೆ.
ಮೊಹಾಲಿಯಲ್ಲಿ ನಡೆಯುತ್ತಿರುವ ಬಿ ಗುಂಪಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ತಂಡವನ್ನು ಪಂದ್ಯದ ಎರಡನೇ ದಿನವಾದ ಶುಕ್ರವಾರ 309 ರನ್ ಗಳಿಗೆ ಆಲೌಟ್ ಮಾಡಿದ ಕರ್ನಾಟಕದ ತಂಡ ದಿನದಾಂತ್ಯಕ್ಕೆ ಮೊದಲ ಇನಿಂಗ್ಸ್ ನಲ್ಲಿ 6 ವಿಕೆಟ್ ಕಳೆದುಕೊಂಡು 255 ರನ್ ಗಳಿಸಿದೆ.
ಕರ್ನಾಟಕ ಮುನ್ನಡೆ ಸಾಧಿಸಬೇಕಾದರೆ 54 ರನ್ ಗಳಿಸಬೇಕಿದ್ದು, ಕೈಯಲ್ಲಿ 4 ವಿಕೆಟ್ ಮಾತ್ರ ಹೊಂದಿದೆ. ಆಲ್ ರೌಂಡರ್ ಶ್ರೇಯಸ್ ಗೋಪಾಲ್ (42) ಮತ್ತು ವಿದ್ಯಾಧರ್ ಪಾಟೀಲ್ (23) 6ನೇ ಮುರಿಯದ ವಿಕೆಟ್ ಗೆ 43 ರನ್ ಬಾರಿಸಿ ಹೋರಾಟ ನಡೆಸಿದ್ದಾರೆ.
ಇದಕ್ಕೂ ಮುನ್ನ ಆರಂಭಿಕನಾಗಿ ಕಣಕ್ಕಿಳಿದ ಕೆಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಮೊದಲ ವಿಕೆಟ್ ಗೆ 119 ರನ್ ಪೇರಿಸಿ ಉತ್ತಮ ಆರಂಭ ನೀಡಿದರು. ಕೆಎಲ್ ರಾಹುಲ್ 87 ಎಸೆತಗಳಲ್ಲಿ 9 ಬೌಂಡರಿ ಸಹಾಯದಿಂದ 59 ರನ್ ಬಾರಿಸಿ ಔಟಾದರೆ, ಮಯಾಂಕ್ 64 ಎಸೆತಗಳಲ್ಲಿ 6 ಬೌಂಡರಿ ಸಹಾಯದಿಂದ 46 ರನ್ ಗಳಿಸಿದ್ದಾಗ ಔಟಾಗಿ 4 ರನ್ ಗಳಿಂದ ಅರ್ಧಶತಕ ವಂಚಿತರಾದರು.
ಅನೀಶ್ (32) ಕೂಡ ತಕ್ಕಮಟ್ಟಿಗೆ ಆಡುವ ಹಂತದಲ್ಲಿ ಎಡವಿದರು. ಮಯಾಂಕ್ ಅಗರ್ವಾಲ್ ನಾಯಕತ್ವದಿಂದ ವಜಾಗೊಂಡ ಹಿನ್ನೆಲೆಯಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸಿದ ದೇವದತ್ ಪಡಿಕ್ಕಲ್ 4ನೇ ಕ್ರಮಾಂಕದಲ್ಲಿ ಆಡಲಿಳಿದರೂ (9) ವಿಫಲರಾದರು.
137 ರನ್ ಗೆ 1 ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿದ್ದ ಕರ್ನಾಟಕದ ಹರ್ಪಿತ್ ಬ್ರಾರ್ ಮಾರಕ ದಾಳಿಗೆ ತತ್ತರಿಸಿ ಸತತ ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. ಈ ಹಂತದಲ್ಲಿ ಶ್ರೇಯಸ್ ಗೋಪಾಲ್ 124 ಎಸೆತಗಳಲ್ಲಿ 3 ಬೌಂಡರಿ ಬಾರಿಸಿ 42 ರನ್ ಗಳಿಸುವ ಮೂಲಕ ವಿಕೆಟ್ ಕಾಯ್ದುಕೊಂಡಿದ್ದಾರೆ. ಇವರಿಗೆ ಉತ್ತಮ ಬೆಂಬಲ ನೀಡಿದ ಕೃಷಿಕ್ ಕೃಷ್ಣ (28) ಮತ್ತು ವಿದ್ಯಾಧರ್ ಪಾಟೀಲ್ (ಅಜೇಯ 23) ಮುನ್ನಡೆಯ ಆಸೆ ಜೀವಂತವಾಗಿರಿಸಿಕೊಂಡಿದ್ದಾರೆ.



