ನವದೆಹಲಿ: ‘ಸಂಸತ್ ಚಲೊ’ ಪ್ರತಿಭಟನೆಯ ಅಂಗವಾಗಿ ಸಂಸತ್ ಭವನದತ್ತ ನುಗ್ಗಲು ಯತ್ನಿಸಿದ ಕಾಕ್ರೋಚ್ ಜನತಾ ಪಾರ್ಟಿ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಮತ್ತು ಅಶ್ರುವಾಯು ಪ್ರಯೋಗಿಸಿದ್ದಾರೆ.
ನೀಟ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಡೆದಿರುವ ಅಕ್ರಮಗಳ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ ಸೋಮವಾರ ಸಂಸತ್ ಚಲೋ ಹೆಸರಿನಲ್ಲಿ ಪ್ರತಿಭಟನೆ ನಡೆಸಿತು.
ಬೆಳಿಗ್ಗೆ 11.30ರ ಸುಮಾರಿಗೆ ಉನ್ನತ ಭದ್ರತಾ ವಲಯದಲ್ಲಿ ಅಳವಡಿಸಲಾಗಿದ್ದ ಸರಣಿ ಬ್ಯಾರಿಕೇಡ್‌ಗಳನ್ನು ದಾಟಲು ಪ್ರತಿಭಟನಾಕಾರರು ಯತ್ನಿಸಿದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ತಳ್ಳಾಟ-ನೂಕಾಟ ನಡೆದಿದ್ದು, ಕೆಲವು ಪೊಲೀಸರು ಹಾಗೂ ಪ್ರತಿಭಟನಾಕಾರರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಅಶ್ರುವಾಯು ಪ್ರಯೋಗ ಶಾಸ್ತ್ರಿ ಭವನ, ರೈಸಿನಾ ರಸ್ತೆ, ಜನಪಥ್ ಮತ್ತು ಅಶೋಕ ರಸ್ತೆಗಳ ಬಳಿ ಜಮಾಯಿಸಿದ್ದ ಬೃಹತ್ ಜನಸ್ತೋಮವನ್ನು ಚದುರಿಸಲು ಭದ್ರತಾ ಪಡೆಗಳು ಅಶ್ರುವಾಯು ಪ್ರಯೋಗ ನಡೆಸಲಾಗಿತ್ತು.
ತೀವ್ರ ಭದ್ರತೆಯ ನಡುವೆಯೂ ಪ್ರತಿಭಟನಾಕಾರರು ಸಂಸತ್ ಭವನದ ಸಮೀಪದಲ್ಲಿರುವ ರೈಲ್ ಭವನ, ಶಾಸ್ತ್ರಿ ಭವನ, ಕೃಷಿ ಭವನ ಹಾಗೂ ಬೋಟ್ ಕ್ಲಬ್‌ವರೆಗೂ ತಲುಪುವಲ್ಲಿ ಯಶಸ್ವಿಯಾಗಿದ್ದರು.
ಮುನ್ನೆಚ್ಚರಿಕಾ ಕ್ರಮವಾಗಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಸಂಸತ್ ಭವನದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಸುಮಾರು 10 ರಿಂದ 15 ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಸದ್ಯ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದ್ದು, ಪ್ರತಿಭಟನಾಕಾರರು ಸಂಸತ್ತಿನತ್ತ ಮುನ್ನಡೆಯದಂತೆ ತಡೆಯಲು ಸಮವಸ್ತ್ರಧಾರಿ ಪೊಲೀಸರು ಹಾಗೂ ನಾಗರಿಕ ಉಡುಪಿನಲ್ಲಿರುವ ಅಧಿಕಾರಿಗಳನ್ನು ದೊಡ್ಡ ಮಟ್ಟದಲ್ಲಿ ನಿಯೋಜಿಸಲಾಗಿದೆ.
3 ಬೇಡಿಕೆಗೆ ಪಟ್ಟು
ನವದೆಹಲಿ: ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ವಕ್ತಾರರೊಂದಿಗೆ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಮಾತುಕತೆ ನಡೆಸಿದ್ದಾರೆ.
ಸಿಜೆಪಿ ವಕ್ತಾರರಾದ ಅಶುತೋಷ್ ರಾಂಕಾ ಮತ್ತು ಸೌರವ್ ದಾಸ್, ಪಕ್ಷದ ಬೇಡಿಕೆಗಳನ್ನು ಒಳಗೊಂಡ ಪತ್ರವನ್ನು ನಡ್ಡಾ ಅವರಿಗೆ ಸಲ್ಲಿಸಿದ್ದಾರೆ.
ನೀಟ್ ಪರೀಕ್ಷಾ ಅಕ್ರಮಗಳಿಗೆ ಕಾರಣರಾದ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಸಂಪುಟದಿಂದ ವಜಾ ಮಾಡಬೇಕು.
ಸೋನಮ್ ವಾಂಗ್ಚಕ್ ಅವರಿಗೆ ಯಾವುದೇ ನಿರ್ಬಂಧಗಳಿಲ್ಲದೆ ಬಿಡುಗಡೆ ಮಾಡಬೇಕು.ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಬಳಿಕೆ ಆತ್ಮಹತ್ಯೆ ಮಾಡಿಕೊಂಡಿರುವ ಎಲ್ಲ ವಿದ್ಯಾರ್ಥಿಗಳ ಕುಟುಂಬದವರಿಗೆ ತಲಾ 1 ಕೋಟಿ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಲಾಗಿದೆ.



