ಸಂಕ್ರಾಂತಿ ಹಬ್ಬಕ್ಕೆ ಮಗಳನ್ನು ಕರೆಯಲು ಬೈಕ್ ನಲ್ಲಿ ಹೋಗುತ್ತಿದ್ದಾಗ ಗಾಳಿಪಟ ದಾರದ ಕುತ್ತಿಗೆ ಸೀಳಿದ್ದರಿಂದ ತಂದೆ ಮೃತಪಟ್ಟ ದಾರುಣ ಘಟನೆ ಬೀದರ್ ನಲ್ಲಿ ಸಂಭವಿಸಿದೆ.
ಚಿಟಗುಪ್ಪ ತಾಲೂಕಿನ ತಾಳಮಡಗಿ ಗ್ರಾಮದ ಸೇತುವೆ ಸಮೀಪ ಬೈಕ್ ನಲ್ಲಿ ಹೋಗುತ್ತಿದ್ದ ಟಗುಪ್ಪ ತಾಲೂಕಿನ ಬಂಬುಳಗಿ ಗ್ರಾಮದ ಸಂಜಕುಮಾರ ಗುಂಡಪ್ಪ ಹೊಸಮನಿ (48) ಗಾಳಿಪಟ್ಟ ದಾರ ಕುತ್ತಿಗೆಗೆ ಸಿಲುಕಿ ಮೃತಪಟ್ಟಿದ್ದಾರೆ.

ಹುಮನಾಬಾದ್ ಪಟ್ಟಣದ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಗಳನ್ನು ಸಂಕ್ರಾಂತಿ ಹಬ್ಬದ ಪ್ರಯುಕ್ತ ಕರೆಯಲು ಬೈಕ್‌ನಲ್ಲಿ ತೆರಳುತ್ತಿದ್ದಾಗ ಮಾಂಜಾ ದಾರ ಕುತ್ತಿಗೆಗೆ ತಗುಲಿ ಕೊಯ್ದಿದೆ.
ಕುತ್ತಿಗೆ ಸೀಳಿ ರಕ್ತ ಹರಿಯುತ್ತಿದ್ದು, ಕೂಡಲೇ ಗುಂಡಪ್ಪ ಮಗಳಿಗೆ ಕರೆ ಮಾಡಿ ಸಹಾಯ ಪಡೆಯಲು ಯತ್ನಿಸಿದ್ದಾರೆ. ಆದರೆ ಗಾಳಿಪಟ ದಾರು ಕುತ್ತಿಗೆ ಆಳಕ್ಕೆ ಕೊಯ್ದಿದ್ದರಿಂದ ಅತೀವ ರಕ್ತಸ್ರಾವಕ್ಕೆ ಒಳಗಾಗಿದ್ದಾರೆ.
ಈ ವೇಳೆ ಇದೇ ದಾರಿಯಲ್ಲಿ ಬಂದ ವ್ಯಕ್ತಿಯೊಬ್ಬರು ಕುತ್ತಿಗೆಗೆ ಬಟ್ಟೆ ಕಟ್ಟಿ ರಕ್ತಸ್ರಾವ ತಡೆಯಲು ಯತ್ನಿಸಿದ್ದು, ಆಂಬುಲೆನ್ಸ್ ಗೆ ಕರೆ ಮಾಡಿದ್ದಾರೆ. ಆದರೆ ಆಂಬುಲೆನ್ಸ್ ತಡವಾಗಿ ಬಂದಿದ್ದರಿಂದ ಗುಂಡಪ್ಪ ಸ್ಥಳದಲ್ಲೇ ಅಸುನೀಗಿದ್ದಾರೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಂಕ್ರಾಂತಿ ದಿನದಂದು ಗಾಳಿಪಟ ಹಾರಿಸುವುದು ಸಂಪ್ರದಾಯವಾಗಿದೆ. ಆದರೆ ಗಾಳಿಪಟ ಹಾರಿಸುವಾಗ ದಾರಕ್ಕೆ ಮಾಂಜಾ ಹಾಕುವುದು ಅಪಾಯಕಾರಿ ಎಂಬುದು ತಿಳಿದಿದ್ದರು ಅದನ್ನು ತಡೆಗಟ್ಟುವ ಪ್ರಯತ್ನಗಳು ಸಮರ್ಪಕವಾಗಿ ನಡೆಯುತ್ತಿಲ್ಲ.
ಆಂಬುಲೆನ್ಸ್ ತಡವಾಗಿ ಬಂದಿರುವುದು ಹಾಗೂ ಗಾಳಿಪಟ ಹಾರಿಸಲು ನೈಲಾನ್ ದಾರ ಹಾಗೂ ಮಾಂಜ ಬಳಕೆ ತಡೆಗೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಕುಟುಂಬದವರು ಪ್ರತಿಭಟನೆ ನಡೆಸಿದ್ದಾರೆ.
ಚಿಟಗುಪ್ಪ ತಾಲೂಕಿನಲ್ಲಿ ಸಂಕ್ರಾಂತಿ ಆಚರಣೆ ವೇಳೆ ಗಾಳಿಪಟಗಳನ್ನು ಹಾರಿಸುವುದು ರೂಢಿಯಲ್ಲಿದೆ. ಎರಡು ದಿನಗಳ ಓರ್ವ ಬಾಲಕನ ಕೈಗೆ ಗಾಳಿಪಟದ ದಾರ ಸಿಲುಕಿ ಗಂಭೀರ ಗಾಯಗೊಂಡಿದ್ದ. ಘಟನೆ ಬಳಿಕ ತಹಸೀಲ್ದಾರ್ ಮಂಜುನಾಥ ಪಾಂಚಾಳ ತಾಲೂಕಿನಾದ್ಯಂತ ಗಾಳಿಪಟ ಹಾರಿಸುವ ವೈರ್ ಮಾಂಜಾ ದಾರ ಮಾರಾಟ ನಿಷೇಧಿಸಲಾಗಿದೆ ಎಂದು ಪ್ರಕಟಣೆ ಹೊರಡಿಸಿದ್ದರು.



