Monday, May 11, 2026
Home ರಾಜ್ಯ ಆಷಾಢದಲ್ಲಿ ಚಾಮುಂಡಿ ವಿಶೇಷ ದರ್ಶನಕ್ಕೆ 300 ರೂ. 2000 ರೂ. ಟಿಕೆಟ್ ದರ ನಿಗದಿ!

ಆಷಾಢದಲ್ಲಿ ಚಾಮುಂಡಿ ವಿಶೇಷ ದರ್ಶನಕ್ಕೆ 300 ರೂ. 2000 ರೂ. ಟಿಕೆಟ್ ದರ ನಿಗದಿ!

by Vahini
0 comments
ashada chamundeshwari temple

ಮೈಸೂರು: ಆಷಾಢ ಮಾಸದಲ್ಲಿ ಚಾಮುಂಡಿ ದರ್ಶನಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಸಾಧ್ಯತೆ ಹಿನ್ನೆಲೆಯಲ್ಲಿ ಭಕ್ತರರ ನಿಯಂತ್ರಣಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ವಿಶೇಷ ದರ್ಶನಕ್ಕೆ 300 ರೂ. ಹಾಗೂ 2000 ರೂ. ದರ ನಿಗದಿಪಡಿಸಲಾಗಿದೆ.

ಪ್ರತಿವರ್ಷದಂತೆ ಈ ಬಾರಿಯೂ ಆಷಾಢ ಮಾಸದಲ್ಲಿ ಚಾಮುಂಡಿ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದಾರೆ. ಅದರಲ್ಲೂ ಶುಕ್ರವಾರ, ಶನಿವಾರ ಮತ್ತು ಭಾನುವಾರವಾದ ವೀಕೆಂಡ್ ಗಳಲ್ಲಿ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ.

ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ವೀಕೆಂಡ್ ಗಳಲ್ಲಿ ಚಾಮುಂಡಿ ಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶ ನಿರ್ಬಂಧಿಸಲಾಗಿದೆ.

ಪ್ರತಿ ಆಷಾಢ ಶುಕ್ರವಾರ ಮಾತ್ರ ಬೆಟ್ಟಕ್ಕೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಉಳಿದ ದಿನಗಳಲ್ಲಿ ಲಲಿತ ಮಹಲ್ ಆವರಣದಿಂದ ಸಾರಿಗೆ ಬಸ್ ಸೇವೆ ಇರಲಿದೆ. ಉಳಿದ ಎರಡು ದಿನಗಳಲ್ಲಿ ಲಲಿತ ಮಹಲ್ ಆವರಣದಿಂದ ಚಾಮುಂಡೇಶ್ವರಿ ಬೆಟ್ಟಕ್ಕೆ ಶುಲ್ಕ ಪಾವತಿಸಿ ಬಸ್​​ನಲ್ಲಿ ತೆರಳಬೇಕಾಗುತ್ತದೆ ಎಂದು ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಮಾಹಿತಿ ನೀಡಿದ್ದಾರೆ.

300 ರೂ. 2000 ರೂ. ಟಿಕೆಟ್ ದರ

ಚಾಮುಂಡಿ ಬೆಟ್ಟದ ಮೇಲೆ ದರ್ಶನದ ಯಾವುದೇ ಟಿಕೆಟ್ ನೀಡಲಾಗುವುದಿಲ್ಲ. ಬದಲಿಗೆ ವಿಶೇಷ ದರ್ಶನದ ಟಿಕೆಟ್​​ ಗಳನ್ನು ಲಲಿತ ಮಹಲ್ ಆವರಣದಲ್ಲಿ ಹಾಗೂ ನಗರ ಬಸ್ ನಿಲ್ದಾಣದಲ್ಲಿ ನೀಡಲಾಗುತ್ತಿದೆ.

ಧರ್ಮ ದರ್ಶನಕ್ಕೆ 300 ರೂ. ಹಾಗೂ 2000 ರೂಪಾಯಿಗಳ ಪ್ರತ್ಯೇಕವಾಗಿ ದರ್ಶನದ ವ್ಯವಸ್ಥೆಗಳಿವೆ. ಇದಕ್ಕೆ ಅನುಗುಣವಾಗಿ ಪ್ರತ್ಯೇಕ ಬಸ್​ಗಳ ವ್ಯವಸ್ಥೆ ಕೂಡ ಇರುತ್ತದೆ.

2000 ರೂ. ಟಿಕೆಟ್ ಪಡೆಯುವಂತಹ ಭಕ್ತರಿಗೆ ವಿಶೇಷವಾಗಿ ಒಂದು ವಿಗ್ರಹ ಒಂದು ಲಾಡು ಪ್ರಸಾದ ಮತ್ತು 500 ಎಂಎಲ್ ನೀರಿನ ಗಾಜಿನ ಬಾಟಲ್ ಒಳಗೊಂಡಂತೆ ವಿಶೇಷ ಬ್ಯಾಗ್ ನೀಡಲಾಗುತ್ತದೆ. ಈ ವಿಶೇಷ ಗಿಫ್ಟ್ ಬ್ಯಾಗ್​​ನಲ್ಲಿ ತಾಯಿ ಚಾಮುಂಡೇಶ್ವರಿ ವಿಗ್ರಹ, ಗಂಡಬೇರುಂಢ ವಿಗ್ರಹ, ಅಂಬಾರಿ ಹೊತ್ತಿರುವಂತಹ ಆನೆಯ ವಿಗ್ರಹ, ಕುಂಕುಮ ಭರಣಿ, ಕೈಗೆ ಕಟ್ಟುವಂತಹ ದಾರ ಸೇರಿದಂತೆ ಶ್ರೀ ಚಕ್ರವಿರುವಂತಹ ಮರದ ಬಾಕ್ಸ್ ನೀಡಲಾಗುತ್ತದೆ.

ಮೋಬೈಲ್, ಕ್ಯಾಮರಾ ನಿಷೇಧ

ಚಾಮುಂಡೇಶ್ವರಿ ಅಮ್ಮನವರ ದೇವಾಲಯದಲ್ಲಿ ಉತ್ಸವ ಮೂರ್ತಿ, ಗರ್ಭಗುಡಿ ಮತ್ತು ಪ್ರಾಂಗಣದಲ್ಲಿ ಮೊಬೈಲ್ ಹಾಗೂ ಕ್ಯಾಮೆರಾಗಳಲ್ಲಿ ಛಾಯಾ ಚಿತ್ರ ಮಾಡುವುದನ್ನು ನಿಷೇಧಿಸಲಾಗಿದೆ.

ಒಂದು ವೇಳೆ ವಿಡಿಯೋ ಮಾಡಿದ್ದಲ್ಲಿ ಅಥವಾ ಫೋಟೋ ತೆಗೆದಿದ್ದಲ್ಲಿ ಮೊಬೈಲ್ ಹಾಗೂ ಕ್ಯಾಮರಾಗಳನ್ನು ಅಧಿಕಾರಿಗಳು ವಶಕ್ಕೆ ಪಡೆಯಲಿದ್ದು, ಹಿಂತಿರುಗಿಸಲಾಗುವುದಿಲ್ಲ. ಅಲ್ಲದೇ ಅಂತಹವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ಭಕ್ತರಿಗೆ ಉಚಿತ ಡ್ರೈಫ್ರೂಟ್ಸ್, ಬಾದಾಮಿ ಹಾಲು

ಧರ್ಮ ದರ್ಶನದ ಸಾಲಿನಲ್ಲಿ ಬರುವಂತಹ ಭಕ್ತಾದಿಗಳಿಗೆ ಉಚಿತ ಡ್ರೈಫ್ರೂಟ್ಸ್ ಹಾಗೆ ಬಾದಾಮಿ ಹಾಲು ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಧರ್ಮ ದರ್ಶನದ ಸರದಿ ಸಾಲಿನಲ್ಲಿ ಮಾರಾಟದ ಮಳಿಗೆಗಳನ್ನ ತೆರೆದು ಮಳಿಗೆಗಳಲ್ಲಿ ನಂದಿನಿ ಉತ್ಪನ್ನಗಳು ಹಾಗೂ ಗಾಜಿನ ನೀರಿನ ಬಾಟಲ್, ಕಾಫಿ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಗಾಜಿನ ಬಾಟಲ್ ಹಿಂತಿರುಗಿಸಿದವರಿಗೆ ಹಣ ನೀಡುವ ವ್ಯವಸ್ಥೆ ಮಾಡಲಾಗಿದೆ. 500 ಎಂಎಲ್ ಗಾಜಿನ ನೀರಿನ ಬಾಟಲಿಗೆ 50 ರೂ. ಇದ್ದು, ಬಾಟಲ್ ವಾಪಸ್ ನೀಡಿದರೆ 30 ರೂ. ವಾಪಸ್ ನೀಡುವ ವ್ಯವಸ್ಥೆ ಮಾಡಲಾಗಿದೆ.

ಚಾಮುಂಡಿ ಬೆಟ್ಟ ಸುತ್ತ ಬಿಗಿ ಭದ್ರತೆ

ಚಾಮುಂಡೇಶ್ವರಿ ಬೆಟ್ಟದ ಬುಡದಿಂದ ಸಾವಿರ ಮೆಟ್ಟಿಲುಗಳಿಗೆ, ಚಾಮುಂಡೇಶ್ವರಿ ಬೆಟ್ಟದ ಮೇಲ್ಭಾಗ ಸೇರಿದಂತೆ ಲಲಿತ ಮಹಲ್ ಆವರಣದಲ್ಲಿ ನೂರಕ್ಕೂ ಹೆಚ್ಚು ಎಐ ತಂತ್ರಜ್ಞಾನ ಆಧಾರಿತ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.

ದರ್ಶನಕ್ಕೆ ಬರುವಂತಹ ಭಕ್ತಾದಿಗಳಿಗೆ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರಿನ ವ್ಯವಸ್ಥೆ, ಊಟದ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ. ಜೊತೆಗೆ ಶೌಚಾಲಯಗಳ ವ್ಯವಸ್ಥೆ ಹಾಗೂ ಇತರೆ ಸೌಕರ್ಯಗಳನ್ನ ಸಹ ಮಾಡಲಾಗಿದೆ.

You may also like

Leave a Comment

Our Company

Lorem ipsum dolor sit amet, consect etur adipiscing elit. Ut elit tellus, luctus nec ullamcorper mattis.

Newsletter

Laest News

@2021 – All Right Reserved. Designed and Developed by PenciDesign