ನವದೆಹಲಿ: ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದ ದೇಶದಲ್ಲಿ ದರ ಏರಿಕೆ ಪ್ರಮಾಣ ಕಲ್ಪನೆಗೂ ಮೀರಿ ಹೆಚ್ಚಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಭವಿಷ್ಯ ನುಡಿದಿದ್ದಾರೆ.
ಮುಂಬೈನಲ್ಲಿ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ ಆಫ್ ಇಂಡಿಯಾದ 37ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, ದೇಶದಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ದರ ಏರಿಕೆ ಕುರಿತು ಪ್ರಸ್ತಾಪಿಸಿದರು.
ಕಳೆದ ಎರಡು ವಾರದಲ್ಲಿ 4ನೇ ಬಾರಿ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಒಟ್ಟಾರೆ 7.48 ರೂ. ಏರಿಕೆಯಾಗಿದೆ. ಇದರಿಂದ ದೇಶದಲ್ಲಿ ಅಗತ್ಯ ವಸ್ತುಗಳ ದರ ಏರಿಕೆ ಆಗುವ ಸಾಧ್ಯತೆ ಇದೆ.
ದೇಶದಲ್ಲಿ ದರ ಏರಿಕೆ ಪ್ರಮಾಣ ನಿರೀಕ್ಷೆಗೂ ಮೀರಿ ಏರಿಕೆಯಾಗಲಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರಸಗೊಬ್ಬರ, ಇಂಧನ ಹಾಗೂ ಷೇರು ಮಾರುಕಟ್ಟೆಯ ಮೇಲೆ ನಿಗಾ ವಹಿಸಿದೆ ಎಂದರು.
ದೇಶದಲ್ಲಿ ರಸಗೊಬ್ಬರ ದರ ನಿರೀಕ್ಷೆಗೂ ಮೀರಿ ಏರಿಕೆಯಾಗಲಿದೆ. ಅಲ್ಲದೇ ಚಿನ್ನದ ಆಮದು ಪ್ರಮಾಣ ಹೆಚ್ಚಾಗಿರುವುದರಿಂದ ಭಾರತ ಹಲವು ಸವಾಲುಗಳನ್ನು ಎದುರಿಸುವಂತಾಗಿದೆ ಎಂದರು.
ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದ ಹರ್ಮುಜ್ ಜಲಸಂಧಿಯಿಂದ ಹಡಗುಗಳ ಸಾಗಾಟಕ್ಕೆ ಬ್ರೇಕ್ ಬಿದ್ದಿದೆ. ಹರ್ಮುಜ್ ಜಲಸಂಧಿ ಮಾರ್ಗದಿಂದ ಭಾರತ ಶೇ.80-90ರಷ್ಟು ಇಂಧನ ಹಾಗೂ ಎಲ್ ಪಿಜಿ ಆಮದು ಮಾಡಿಕೊಳ್ಳುತ್ತಿದೆ.
ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದ ಪ್ರಧಾನಿ ನರೇಂದ್ರ ಮೋದಿ ಒಂದು ವರ್ಷ ಚಿನ್ನ ಖರೀದಿಸಬೇಡಿ, ಅಡುಗೆ ಎಣ್ಣೆ ಬಳಕೆ ಪ್ರಮಾಣ ಕಡಿಮೆ ಮಾಡಿ, ಮಿತವ್ಯಯ ಮಾಡಿ ದೇಶ ಭಕ್ತಿ ಪ್ರದರ್ಶಿಸಿ ಎಂದು ಕರೆ ನೀಡಿದ್ದರು.



