ಬೆಂಗಳೂರು: ಮಧ್ಯಮ ಮತ್ತು ಕೆಳಮಧ್ಯಮ ವರ್ಗದವರು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಮತ್ತು ಸರಕಾರಿ ನೌಕರರಿಗಾಗಿ ಸರಕಾರಿ ಸ್ವಾಮ್ಯದ ಎಂಎಸ್ ಐಎಲ್ ಸಂಸ್ಥೆ ರೂಪಿಸಿರುವ ವಿವಿಧ ಆಕರ್ಷಕ ಟೂರ್ ಪ್ಯಾಕೇಜುಗಳಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ ಚಾಲನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಟೂರ್ ಪ್ಯಾಕೇಜ್ ಗೆ ಚಾಲನೆ ನೀಡಿದ ನಂತರ ಸಂಸ್ಥೆಯ ಡೈರಿ, ಕ್ಯಾಲೆಂಡರ್ ಮತ್ತು ಬಾಂಡ್ ಜೆರಾಕ್ಸ್ ಪೇಪರ್ ಕೂಡ ಬಿಡುಗಡೆ ಮಾಡಿ ಮಾತನಾಡಿದರು.
ಎಂಎಸ್ ಐಎಲ್ ಮೊದಲಿನಿಂದಲೂ ಗುಣಮಟ್ಟ ಮತ್ತು ವಿಶ್ವಾಸಾರ್ಹತೆಗೆ ಹೆಸರಾಗಿದೆ. ಈಗ ಟೂರ್ ಪ್ಯಾಕೇಜುಗಳ ಮೂಲಕ ಸಂಸ್ಥೆಯು ಜನರಿಗೆ ಮತ್ತಷ್ಟು ಹತ್ತಿರವಾಗುತ್ತಿದೆ. ಈ ಪ್ಯಾಕೇಜುಗಳ ಅಡಿಯಲ್ಲಿ ಈ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಆದಿಕೈಲಾಸ ಮತ್ತು ವಾರಣಾಸಿಗೆ ಪ್ರವಾಸ ಆಯೋಜಿಸಲಾಗುವುದು. ಮುಖ್ಯವಾಗಿ ನಾವು ಆಫ್-ಲೈನ್ ಪ್ರವಾಸಿಗರಿಗೆ ಆದ್ಯತೆ ಕೊಡುತ್ತಿದ್ದೇವೆ ಎಂದು ಅವರು ಹೇಳಿದರು.
ಪ್ಯಾಕೇಜುಗಳಲ್ಲಿ ಸುರಕ್ಷತೆ, ಶುಚಿರುಚಿಯಾದ ಆಹಾರ, ಮನೆ ಬಾಗಿಲಿನಿಂದಲೇ ಕರೆದುಕೊಂಡು ಹೋಗಿ ವಾಪಸ್ ಅಲ್ಲಿಗೇ ಬಿಡುವುದು, ಸಹಾಯಕರ ನೆರವು, ಮಾಸಿಕ ಕಂತುಗಳಲ್ಲಿ ಹಣ ಪಾವತಿ, ಲಕ್ಕಿ ಡ್ರಾ, ಕೈಗೆಟುಕುವ ವೆಚ್ಚದಲ್ಲಿ ಉತ್ತರ ಭಾರತ ಪ್ರವಾಸ ಮುಂತಾದ ಸೌಲಭ್ಯ ಮತ್ತು ಆಕರ್ಷಣೆಗಳಿವೆ. ಗುಂಪು ಪ್ರವಾಸ ಮಾಡಲು ಬಯಸುವವರಿಗೆ ಪ್ರತಿ ಬ್ಯಾಚಿನಲ್ಲಿ ಗರಿಷ್ಠ 100 ಮಂದಿಗೆ ಅವಕಾಶ ಇರಲಿದೆ ಎಂದು ಅವರು ಮಾಹಿತಿ ನೀಡಿದರು.
ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆಂದು ʻಸ್ಟಡಿ-ಕಂ-ಪ್ಲೆಷರ್ ಟೂರ್), ಇಕೋ ಟೂರಿಸಂ ಮತ್ತು ಕರಾವಳಿ ಪ್ರದೇಶಗಳ ವೀಕ್ಷಣೆ ಇರುವ ಕೋಸ್ಟಲ್ ಟೂರಿಸಂ ಮುಂತಾದ ಪ್ಯಾಕೇಜುಗಳನ್ನು ರೂಪಿಸಲು ಎಂಎಸ್ ಐಎಲ್ ಚಿಂತನೆ ನಡೆಸುತ್ತಿದೆ. ಸಂಸ್ಥೆಯು ಸದ್ಯಕ್ಕೆ ರೂಪಿಸಿರುವ ಪ್ಯಾಕೇಜಿನಲ್ಲಿ ಕೇವಲ 20 ಸಾವಿರ ರೂ. ವೆಚ್ಚದಲ್ಲಿ 15ರಿಂದ 18 ದಿನಗಳ ಉತ್ತರ ಭಾರತ ಪ್ರವಾಸ ಮಾಡಿಕೊಂಡು ಬರಬಹುದು ಎಂದು ಎಂಬಿ ಪಾಟೀಲ್ ವಿವರಿಸಿದರು.
ಸರಕಾರಿ ಉದ್ಯೋಗಿಗಳಿಗೆ ರೂಪಿಸಿರುವ ಟೂರ್ ಪ್ಯಾಕೇಜಿನಲ್ಲಿ ಶೇ.50ರಷ್ಟು ಹಣ ಪಾವತಿಸಿ, ಪ್ರವಾಸ ಕೈಗೊಳ್ಳಬಹುದು. ಪ್ರವಾಸ ಮುಗಿಸಿಕೊಂಡು ಬಂದ ಬಳಿಕ ಉಳಿದ ಶೇ.50ರಷ್ಟು ಹಣವನ್ನು ಮಾಸಿಕ ಕಂತುಗಳಲ್ಲಿ ಕಟ್ಟಬಹುದು. ಹಾಗೆಯೇ ಲಕ್ಕಿ ಡ್ರಾದಲ್ಲಿ ವಿಜೇತರಾಗುವ ಅದೃಷ್ಟಶಾಲಿಗಳು ಡ್ರಾ ನಂತರದ ಹಣವನ್ನು ಪಾವತಿಸಬೇಕಾಗಿಲ್ಲ. ಈ ಎಲ್ಲ ಪ್ಯಾಕೇಜುಗಳಲ್ಲೂ ಎಂಎಸ್ ಐಎಲ್ ವತಿಯಿಂದ ಟೂರ್ ಮ್ಯಾನೇಜರ್ ಅಥವಾ ಸಹಾಯಕರೊಬ್ಬರು ಜತೆಗಿರಲಿದ್ದು, ಪ್ರವಾಸಿಗರ ಬೇಕು-ಬೇಡಗಳನ್ನು ಆಲಿಸಿ, ನೆರವು ನೀಡಲಿದ್ದಾರೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಎಂಎಸ್ಐಎಲ್ ಅಧ್ಯಕ್ಷ ಪುಟ್ಟರಂಗಶೆಟ್ಟಿ, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಎಂಎಸ್ಐಎಲ್ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್ ವಾಣಿಜ್ಯ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ, ಎಂಎಸ್ಐಎಲ್ ನಿರ್ದೇಶಕ ಚಂದ್ರಪ್ಪ, ಪ್ರವಾಸ ವಿಭಾಗದ ಮುಖ್ಯಸ್ಥ ರವಿಕುಮಾರ್ ಮುಂತಾದವರು ಭಾಗವಹಿಸಿದ್ದರು.
ಎಲ್ಲೆಲ್ಲಿಗೆ ಪ್ರವಾಸ ಪ್ಯಾಕೇಜು?
ಎಂಎಸ್ ಐಎಲ್ ಸಂಸ್ಥೆಯ ಟೂರ್ಸ್ ಅಂಡ್ ಟ್ರಾವೆಲ್ಸ್ ವಿಭಾಗವು ಈ ಟೂರ್ ಪ್ಯಾಕೇಜುಗಳನ್ನು ನಿರ್ವಹಿಸಲಿದೆ. ಕಾಶಿ, ಅಯೋಧ್ಯೆ, ಪುರಿ, ಆದಿ ಕೈಲಾಸ ಮುಂತಾದ ಧಾರ್ಮಿಕ ಮತ್ತು ಐತಿಹಾಸಿಕ ತಾಣಗಳಿಗೆ ಪ್ರವಾಸಿಗರನ್ನು ಕರೆದೊಯ್ಯಲಿದೆ. ಅಲ್ಲದೇ ದುಬೈ, ಸಿಂಗಪುರ್, ವಿಯಟ್ನಾಂ, ಶ್ರೀಲಂಕಾ, ನೇಪಾಳ, ಥಾಯ್ಲೆಂಡ್ ಮತ್ತು ಯೂರೋಪಿನ ಹಲವು ದೇಶಗಳಿಗೂ ಎಂಎಸ್ ಐಎಲ್ ಟೂರ್ ಪ್ಯಾಕೇಜುಗಳನ್ನು ರೂಪಿಸಿದೆ. ಈ ಪ್ರವಾಸಗಳಿಗೆ ಈಗಾಗಲೇ ದಿನಾಂಕ ನಿಗದಿಯಾಗಿದ್ದು, ಸಾರ್ವಜನಿಕರು ಮಾಹಿತಿ ಪಡೆದುಕೊಳ್ಳಬಹುದು.
24/7 ಸಹಾಯವಾಣಿ ಸೌಲಭ್ಯ
ಪ್ರವಾಸಿಗರ ಅನುಕೂಲಕ್ಕೆ ಎಂಎಸ್ ಐಎಲ್ 24/7 ಸಹಾಯವಾಣಿ ಮತ್ತು ವಾಟ್ಸ್ಯಾಪ್ ಸೌಲಭ್ಯವನ್ನೂ (080-45888882, 9353645921) ಹೊಂದಿದೆ. ಇದರ ನಿರ್ವಹಣೆಗಾಗಿ ಪ್ರತ್ಯೇಕ ತಂಡವೇ ಇರಲಿದೆ. ಒಂದು ನಂಬರಿನಲ್ಲಿ ಯಾರಾದರೂ ಮಾತನಾಡುತ್ತಿದ್ದರೆ, ಅದು ತಾನಾಗಿಯೇ ಮತ್ತೊಂದು ಸಂಖ್ಯೆಗೆ ಸಂಪರ್ಕ ಕಲ್ಪಿಸುವ ಕ್ಲೌಡ್ ಬೇಸ್ಡ್ ಟೆಲಿಕಾಂ ಸಿಸ್ಟಮ್ ಅನ್ನು ಅಳವಡಿಸಿಕೊಳ್ಳಲಾಗಿದೆ.