ಔರಾದ್ : ಬೀದರ್-ಔರಾದ್ ರಾಷ್ಟ್ರೀಯ ಹೆದ್ದಾರಿ– 161ರ ಮುಸ್ತಾಪೂರ ಗ್ರಾಮ ಸಮೀಪದ ಟೋಲ್ ಗೇಟ್ ಬಳಿ ಸೋಮವಾರ ಸಂಭವಿಸಿದ ಅಪಘಾತದಲ್ಲಿ ವೈದ್ಯರೊಬ್ಬರು ಮೃತಪಟ್ಟಿದ್ದಾರೆ.
ಸಂತಪೂರ ನಗರದ ನೀಲಕಂಠರಾವ ಭೋಸ್ಲೆ (50) ಮೃತ ರ್ದುದೈವಿ. ಸಿಖ್ ಯಾತ್ರಿಕರು ನಾಂದೇಡನಿಂದ ಬೀದರ ಕಡೆಗೆ ಟೆಂಪೋ ಟ್ರಾವಲ್ (ಟಿಟಿ) ವಾಹನದಲ್ಲಿ ಸಂಚರಿಸುತ್ತಿದ್ದರು. ಪ್ರಗತಿಯಲ್ಲಿರುವ ಟೋಲ್ ಗೇಟ್ ಬಳಿಯಲ್ಲಿ ಬೀದರ ಕಡೆಯಿಂದ ಬಂದಿರುವ ಬೈಕ್ ನೇರ ಮುಖಾಮುಖಿ ಡಿಕ್ಕಿಯಾಗಿದೆ. ಟಿಟಿ ವಾಹನ ವೇಗದ ರಭಸಕ್ಕೆ ಬೈಕ್ ಸವಾರ, ವೈದ್ಯ ನೀಲಕಂಠರಾವ ಭೋಸ್ಲೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ದ್ವಿಚಕ್ರ ವಾಹನ ಸವಾರ ಸಾವನ್ನಪ್ಪಿದ ಸುದ್ದಿ ತಿಳಿಯುತ್ತಿದಂತೆ ಚಾಲಕ ಸೇರಿದಂತೆ ಪ್ರಯಾಣಿಕರು ಪರಾರಿಯಾಗಿದ್ದಾರೆ ಎಂದು ಪ್ರತೇಕ್ಷದರ್ಶಿಗಳು ತಿಳಿಸಿದ್ದಾರೆ. ಅಪಘಾತದ ಭಯಾನಕ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಎಸ್ಪಿ ಪ್ರದೀಪ್ ಗುಂಟಿ, ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ, ಪಿಎಸ್ ಐ ನಂದಕೂಮಾರ ಮೂಳೆ, ಎಎಸ್ ಐ ಸುನಿಲಕುಮಾರ ಕೋರೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಸಂತಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಧಿಕಾರಿಗಳ ವಿರುದ್ಧ ಆಕ್ರೋಶ : ಔರಾದ್-ಬೀದರ ರಾಷ್ಟ್ರೀಯ ಹೆದ್ದಾರಿ ಮೇಲೆ ಪದೆ ಪದೇ ಅಪಘಾತಗಳು ಸಂಭವಿಸುತ್ತಿವೆ. ಇದಕ್ಕೆ ಇಲಾಖೆಯ ಅಧಿಕಾರಿಗಳೇ ಹೊಣೆಗಾರಿಕೆ ಹೊರಬೇಕು ಎಂದು ದಸಂಸ ಜಿಲ್ಲಾ ಸಂಚಾಲಕ ಧನರಾಜ ಮುಸ್ತಾಪೂರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆಯ ಮೇಲೆ ಹಂಪ್ ಅಳವಡಿಸಬೇಕು. ವೇಗವಾಗಿ ಸಂಚರಿಸುತ್ತಿರುವ ಸಿಖ್ ಯಾತ್ರಿಕರ ಹಾಗೂ ಮಹಾರಾಷ್ಟ್ರ ಕಡೆಯಿಂದ ಬರುವ ವಾಹನಗಳ ವೇಗಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು. ಅತಿ ವೇಗವಾಗಿ ಚಲಾಯಿಸುವ ವಾಹನಗಳಿಗೆ ಪೊಲೀಸರು ದಂಡ ಹಾಕಬೇಕು. ಇದರಿಂದಾದರೂ ಅಪಘಾತ ಸಂಖ್ಯೆಗೆ ಕಡಿವಾಣ ಹಾಕಬಹುದು ಎಂದಿದ್ದಾರೆ.


