ನೀರಿನ ಕೊಡ ಉರಡತಲೇ, ತುಪ್ಪದ ಕೊಡ ಉಕ್ಕತಲೇ ಪರಾಕ್ ಎಂದು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಆಡೂರು ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ಗೊರವಯ್ಯ ಭವಿಷ್ಯ ನುಡಿದಿದ್ದಾರೆ.
ಮಾಘ ಹುಣ್ಣಿಮೆಯ ದಿನವಾದ ಬುಧವಾರ 12 ಅಡಿ ಎತ್ತರದ ಬಿಲ್ಲೇರಿದ ಗೊರವಯ್ಯ ಹನುಮನಗೌಡ ಗುರೇಗೌಡರ ದೈವವಾಣಿ ನುಡಿದಿದ್ದಾರೆ.
ಗೊರವಯ್ಯ ನುಡಿದ ನೀರಿನ ಕೊಡ ಉರಡತಲೇ, ತುಪ್ಪದ ಕೊಡ ಉಕ್ಕತಲೇ ಪರಾಕ್ ಎಂಬ ಭವಿಷ್ಯವಾಣಿ ಶುಭವಾಗಿದ್ದು, ಈ ವರ್ಷ ರಾಜ್ಯದಲ್ಲಿ ಉತ್ತಮ ಮಳೆ ಬೆಳೆ ಆಗಲಿದೆ ಎಂದು ವಿಶ್ಲೇಷಸಲಾಗಿದೆ. ಈ ಮೂಲಕ ರಾಜ್ಯದ ರೈತರಿಗೆ ಸಿಹಿ ಸುದ್ದಿ ಬಂದಿದೆ.
ಒಂದು ಸಾಲು, ನಾಲ್ಕೈದು ಪದಗಳ ಭವಿಷ್ಯ ವಾಣಿಗಾಗಿ ಸಾವಿರಾರು ಜನರು ನಿಶ್ಯಬ್ದವಾಗಿ ನಿಂತು ಕಾದಿರುತ್ತಾರೆ. ಆ ಒಂದು ಸಾಲು ಇಡೀ ವರ್ಷದ ನಾಡಿನ ಮತ್ತು ನಾಡಿನ ಜನರ ಭವಿಷ್ಯವನ್ನು ತಿಳಿಸಿಬಿಡುತ್ತದೆ ಅನ್ನೋದು ಮೈಲಾರಲಿಂಗೇಶ್ವರ ಭಕ್ತರ ನಂಬಿಕೆ
ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನ ಆಡೂರು ಮೈಲಾರಲಿಂಗೇಶ್ವರ ಜಾತ್ರೆಯ ಪ್ರಯುಕ್ತ ನುಡಿದಿರುವ ಕಾರ್ಣಿಕ. ಇದು ಕಾರ್ಣಿಕಗಳ ಪೈಕಿ 2025 ರ ಮೊದಲ ಭವಿಷ್ಯವಾಣಿ ಅನ್ನಬಹುದು. ಭರತ ಹುಣ್ಣಿಮೆ ದಿನದ ಪ್ರಯುಕ್ತ ಬುಧವಾರ ಫೆಬ್ರವರಿ 12 ರಂದು ಆಡೂರಿನಲ್ಲಿ ಮೈಲಾರಲಿಂಗೇಶ್ವರ ಕಾರ್ಣಿಕ ಹೇಳಲಾಗಿದೆ. ಸಂಪ್ರದಾಯದಂತೆ ಗೊರವಯ್ಯ ಉದ್ದದ ಗಳ ಅಥವಾ ಕೋಲನ್ನು ಏರುತ್ತಾ, ಪರಾಕ್ ಎನ್ನುತ್ತಿದ್ದಂತೆ ಜನರು ಪೂರ್ತಿ ಮೌನ ಆಗುತ್ತಾರೆ. ಆಗ ಗೊರವಯ್ಯ ಕಾರ್ಣಿಕ ನುಡಿತಾರೆ.


